ಐಸಿಸಿ ಏಕದಿನ ವಿಶ್ವಕಪ್ 2023 (ICC World Cup 2023) ಟೂರ್ನಿ ಕುತೂಹಲ ಕೆರಳಿಸುತ್ತಿದೆ. ಇಂದು ನಡೆಯಲಿರುವ 26ನೇ ಪಂದ್ಯದಲ್ಲಿ ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ತಂಡ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಾಕ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರಷ್ಟೆ ಉಳಿಗಾಲ. ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ಇತ್ತ ಆಫ್ರಿಕಾ ಇಂದು ಗೆದ್ದರೆ ಟೇಬಲ್ ಟಾಪರ್ ಆಗಲಿದೆ. ಭಾರತ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ.
ಪಾಕಿಸ್ತಾನ ತಂಡ ಆರಂಭದ ಎರಡು ಪಂದ್ಯ ಗೆದ್ದಿದ್ದು ಬಿಟ್ಟರೆ ನಂತರ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲುಂಡಿರುವುದು ಬಾಬರ್ ನಾಯಕತ್ವಕ್ಕೆ ಕುತ್ತುಬಂದಿದೆ. ಪಾಕ್ ಆಟಗಾರರು ಸಾಕಷ್ಟು ಟೇಕೆಗಳಿಗೆ ಒಳಗಾಗಿದ್ದಾರೆ. ಹೀಗಾಗಿ ಇಂದು ಯಾವರೀತಿ ಪ್ರದರ್ಶನ ನೀಡುತ್ತಾರೆ ನೋಡಬೇಕು. ನಾಯಕ ಫಾರ್ಮ್ಗೆ ಬಂದರೂ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಬ್ಯಾಟರ್ಗಳು ಅಲ್ಪ ಮಟ್ಟದ ಕೊಡುಗೆ ನೀಡುತ್ತಿದ್ದಾರೆ. ಆದರೆ, ಬೌಲರ್ಗಳ ಪೈಕಿ ಶಾಹಿನ್ ಅಫ್ರಿದಿ ಬಿಟ್ಟರೆ ಮತ್ಯಾರು ಮಾರಕವಾಗುತ್ತಿಲ್ಲ.
ICC ODI rankings: ಅಗ್ರಸ್ಥಾನಕ್ಕೆ ಗಿಲ್ ಹತ್ತಿರ; ಅಗ್ರ ಐದರಲ್ಲಿ ಕೊಹ್ಲಿ..! ಡಿ ಕಾಕ್, ಕ್ಲಾಸೆನ್ಗೆ ಮುಂಬಡ್ತಿ
ದ. ಆಫ್ರಿಕಾ ತಂಡ ಸಾಕಷ್ಟು ಬಲಿಷ್ಠವಾಗಿದೆ. ಆಡಿರುವ ಐದು ಪಂದ್ಯಗಳ ಪೈಕಿ ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು ಬಿಟ್ಟರೆ ಉಳಿದ ನಾಲ್ಕು ಪಂದ್ಯಗಳಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಇದೀಗ ಪಾಯಿಂಟ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆಫ್ರಿಕಾ ಇಂದು ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಭಾರತ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ತಂಡದ ಪರ ಎಲ್ಲ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕ್ವಿಂಟನ್ ಡಿಕಾಕ್ ಕಳೆದ ಪಂದ್ಯದಲ್ಲಿ 174 ರನ್ ಸಿಡಿಸಿದ್ದರು. ಆಫ್ರಿಕಾ ಬೌಲರ್ಗಳು ಕೂಡ ಸಂಘಟಿತ ಪ್ರದರ್ಶನ ನೀಡುತ್ತಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸಮತೋಲಿತ ಪಿಚ್‌ಗೆ ಹೆಸರುವಾಸಿಯಾಗಿದೆ. ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗಿಬ್ಬರಿಗೂ ಸಹಕಾರಿಯಾಗಿದೆ. ಈ ವಿಕೆಟ್ ಸಾಮಾನ್ಯವಾಗಿ ಶುಷ್ಕವಾಗಿದ್ದು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಪಂದ್ಯವು ಮುಂದುವರೆದಂತೆ, ಪಿಚ್ ಸ್ವಲ್ಪ ನಿಧಾನವಾಗುತ್ತದೆ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವ ತಂಡಕ್ಕೆ ರನ್ ಕಲೆಹಾಕಲು ಕೊಂಚ ಕಷ್ಟಕರವಾಗಿಸುತ್ತದೆ. ಅದಕ್ಕಾಗಿಯೇ ಹೆಚ್ಚಿನ ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:43 am, Fri, 27 October 23