ENG vs SL: ಇಂಗ್ಲೆಂಡ್ ವಿರುದ್ಧ 5ನೇ ಬಾರಿ ಗೆದ್ದು ಬೀಗಿದ ಶ್ರೀಲಂಕಾ
Sri Lanka vs England: ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಬಾಂಗ್ಲಾದೇಶ್ ವಿರುದ್ಧ ಮಾತ್ರ ಗೆದ್ದಿರುವ ಇಂಗ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಪರಾಜಯಗೊಂಡಿದೆ.
ಏಕದಿನ ವಿಶ್ವಕಪ್ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಜಾನಿ ಬೈರ್‌ಸ್ಟೋವ್ (30) ಹಾಗೂ ಡೇವಿಡ್ ಮಲಾನ್ (28) ಬೇಗನೆ ನಿರ್ಗಮಿಸಿದರು. ಆ ಬಳಿಕ ಬಂದ ಜೋ ರೂಟ್ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ಜೋಸ್ ಬಟ್ಲರ್ 8 ರನ್ಗಳಿಸಿದರೆ, ಲಿಯಾಮ್ ಲಿವಿಂಗ್‌ಸ್ಟೋನ್ 1 ರನ್ ಬಾರಿಸಿ ಔಟಾದರು. ಇನ್ನು ಮೊಯೀನ್ ಅಲಿ 15 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಬೆನ್ ಸ್ಟೋಕ್ಸ್ 43 ರನ್ ಬಾರಿಸಿ ನಿರ್ಗಮಿಸಿದರು.
ಅಂತಿಮವಾಗಿ ಇಂಗ್ಲೆಂಡ್ ತಂಡವು 33.2 ಓವರ್ಗಳಲ್ಲಿ 156 ರನ್ಗಳಿಸಿ ಆಲೌಟ್ ಆಯಿತು. ಶ್ರೀಲಂಕಾ ಪರ ಲಹಿರು ಕುಮಾರ 3 ವಿಕೆಟ್ ಪಡೆದರೆ, ಕಸುನ್ ರಜಿತ ಹಾಗು ಏಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್ ಪಡೆದರು.
ಇನ್ನು 157 ರನ್‌ಗಳ ಸುಲಭ ಗುರಿ ಪಡೆದ ಶ್ರೀಲಂಕಾ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 23 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಪಾತುಮ್ ನಿಸ್ಸಂಕಾ (77) ಹಾಗೂ ಸದೀರ ಸಮರವಿಕ್ರಮ (65) ಶತಕದ ಜೊತೆಯಾಟವಾಡಿದರು. ಈ ಮೂಲಕ 25.4 ಓವರ್ಗಳಲ್ಲಿ 160 ರನ್ ಬಾರಿಸುವ ಮೂಲಕ ಶ್ರೀಲಂಕಾ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಇಂಗ್ಲೆಂಡ್ ವಿರುದ್ಧ 5ನೇ ಬಾರಿ ಗೆದ್ದು ಬೀಗಿದ ಶ್ರೀಲಂಕಾ:
ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ಗೆದ್ದಿರುವುದು 1999ರಲ್ಲಿ. ಇದಾದ ಬಳಿಕ ನಡೆದ ಐದು ವಿಶ್ವಕಪ್ನಲ್ಲೂ ಆಂಗ್ಲರ ವಿರುದ್ಧ ಲಂಕಾ ಪಡೆ ಪಾರುಪತ್ಯ ಮೆರೆಯುತ್ತಾ ಬಂದಿದೆ. ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಶ್ರೀಲಂಕಾ ತಂಡದ ಪ್ರದರ್ಶನ ಈ ಕೆಳಗಿನಂತಿದೆ..
- 2007 – ಶ್ರೀಲಂಕಾ ತಂಡಕ್ಕೆ 2 ರನ್‌ಗಳ ರೋಚಕ ಜಯ
- 2011 – ಶ್ರೀಲಂಕಾ ತಂಡಕ್ಕೆ 10 ವಿಕೆಟ್‌ಗಳ ಅಮೋಘ ಗೆಲುವು
- 2015 – ಶ್ರೀಲಂಕಾಗೆ 9 ವಿಕೆಟ್‌ಗಳ ಭರ್ಜರಿ ಜಯ
- 2019 – ಶ್ರೀಲಂಕಾ ತಂಡಕ್ಕೆ 20 ರನ್‌ಗಳ ಜಯ
- 2023 – ಶ್ರೀಲಂಕಾಗೆ 8 ವಿಕೆಟ್‌ಗಳ ಜಯ.
ಇದನ್ನೂ ಓದಿ: Glenn Maxwell: ತೂಫಾನ್ ಶತಕ…ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್
ಹಾಲಿ ಚಾಂಪಿಯನ್ನರಿಗೆ 4ನೇ ಸೋಲು:
ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಬಾಂಗ್ಲಾದೇಶ್ ವಿರುದ್ಧ ಮಾತ್ರ ಗೆದ್ದಿರುವ ಇಂಗ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಪರಾಜಯಗೊಂಡಿದೆ.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ.