2024 ರ ವಿಶ್ವಕಪ್​ಗಾಗಿ 3 ಪಂದ್ಯಗಳ ಸರಣಿಯನ್ನು ಒಂದು ವರ್ಷ ಮುಂದೂಡಿದ ಪಾಕಿಸ್ತಾನ..!

| Updated By: ಪೃಥ್ವಿಶಂಕರ

Updated on: Oct 20, 2022 | 5:57 PM

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿರುವ ಪಿಸಿಬಿ, ಮುಂದಿನ ವರ್ಷ ಅಂದರೆ ಜನವರಿ 2023ರಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು 2024 ಕ್ಕೆ ಮುಂದೂಡಿದೆ.

2024 ರ ವಿಶ್ವಕಪ್​ಗಾಗಿ 3 ಪಂದ್ಯಗಳ ಸರಣಿಯನ್ನು ಒಂದು ವರ್ಷ ಮುಂದೂಡಿದ ಪಾಕಿಸ್ತಾನ..!
ಪಾಕ್ ತಂಡ
Follow us on

ಕಾಂಗರೂಗಳ ನಾಡಲ್ಲಿ ಕ್ರಿಕೆಟ್ ಮಾದರಿಯ ಚುಟುಕು ವಿಶ್ವ ಸಮರ (T20 World Cup 2022) ಆರಂಭವಾಗಿದೆ. ಈ ಮಿನಿ ವಿಶ್ವಕಪ್​ನಲ್ಲಿ ಈಗಾಗಲೇ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಸೂಪರ್ 12 ಸುತ್ತಿನ ಪಂದ್ಯಗಳ ಆರಂಭಕ್ಕೆ ಇನ್ನೇರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸುತ್ತಿನಿಂದ ಎಲ್ಲಾ ತಂಡಗಳು ಪ್ರಶಸ್ತಿಗಾಗಿ ನೈಜ ಅಭಿಯಾನ ಆರಂಭಿಸಲಿದ್ದು, ಇದಕ್ಕಾಗಿ ಎಲ್ಲಾ ತಂಡಗಳು ಸಕಲ ಸಿದ್ದತೆ ಮಾಡಿಕೊಂಡಿವೆ. ಅದರಂತೆ ಪಾಕಿಸ್ತಾನ (Pakistan Cricket Team) ಕೂಡ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯ ತಲುಪಿದ್ದು, ಈ ತಂಡ ಅ.23 ರಂದು ಟೀಂ ಇಂಡಿಯಾವನ್ನು (India Vs Pakistan) ಎದುರಿಸಲಿದೆ. ಆದರೆ 2023 ರ ವಿಶ್ವಕಪ್​ನಲ್ಲಿ ಇನ್ನೂ ತನ್ನ ಮೊದಲ ಪಂದ್ಯವನ್ನೇ ಆಡದ ಬಾಬರ್ ಪಡೆ, ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ ತಯಾರಿಗಾಗಿ ಪ್ರಮುಖ ಸರಣಿಯನ್ನು ಬರೋಬ್ಬರಿ ಒಂದು ವರ್ಷ ಮುಂದೂಡಿದೆ.

ಕಳೆದ ವರ್ಷ ಯುಎಇಯಲ್ಲಿ ನಡೆದ 7ನೇ ಆವೃತ್ತಿಯ ವಿಶ್ವಕಪ್​ನಲ್ಲಿ ಸೆಮಿಫೈನಲ್‌ ತಲುಪಿದ್ದ ಪಾಕ್ ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಫೈನಲ್​ಗೇರಬಲ್ಲ ಪ್ರಮುಖ ತಂಡಗಳಲ್ಲಿ ಒಂದಾಗಿದೆ. ಅದಾಗ್ಯೂ ಈ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಾಗಿ ನಾಯಕ ಬಾಬರ್ ಹಾಗೂ ವಿಕೆಟ್ ಕೀಪರ್ ರಿಜ್ವಾನ್ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಇಬ್ಬರು ಫ್ಲಾಪ್ ಆದರೆ ತಂಡ ಸಂಕಷ್ಟಕ್ಕೆ ಸಿಲುಕುವುದಂತೂ ಖಚಿತ. ಆದರೂ ಕೂಡ ಸತತ ಎರಡನೇ ಬಾರಿಗೆ ಕೊನೆಯ 4ರ ಘಟಕ್ಕೆ ತಲುಪುವ ತಂಡಗಳಲ್ಲಿ ಇದು ಕೂಡ ಒಂದು ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಇದನ್ನೂ ಓದಿ: SL vs NED: ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಸೂಪರ್ 12 ಸುತ್ತಿಗೆ ಎಂಟ್ರಿಕೊಟ್ಟ ಶ್ರೀಲಂಕಾ ತಂಡ

ವಿಶ್ವಕಪ್‌ ತಯಾರಿಗೆ ಸರಣಿ ಮುಂದೂಡಿಕೆ

ಈ ಬಾರಿಯ ವಿಶ್ವಕಪ್​ ತಯಾರಿಯನ್ನು ಸಂಪೂರ್ಣಗೊಳಿಸಿರುವ ಪಾಕ್ ಮಂಡಳಿ ಇಷ್ಟು ಸಾಲದೆಂಬಂತೆ, ಮುಂದಿನ ಆವೃತ್ತಿಯ ವಿಶ್ವಕಪ್​ಗೆ ತಂಡವನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಬಯಸಿದೆ. ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿರುವ ಪಿಸಿಬಿ, ಮುಂದಿನ ವರ್ಷ ಅಂದರೆ ಜನವರಿ 2023ರಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು 2024 ಕ್ಕೆ ಮುಂದೂಡಿದೆ. ಅಕ್ಟೋಬರ್ 19 ರಂದು ಈ ಬಗ್ಗೆ ಕ್ರಿಕೆಟ್ ವೆಸ್ಟ್ ಇಂಡೀಸ್‌ನೊಂದಿಗೆ ಮಾತನಾಡಿರುವುದಾಗಿ ಹೇಳಿಕೊಂಡಿರುವ ಪಿಸಿಬಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಸರಣಿ ಮುಂದೂಡುವ ಬಗ್ಗೆ ಮಾತುಕತೆ ನಡೆಸಿದ್ದು, ವಿಂಡೀಸ್ ಮಂಡಳಿ ಕೂಡ ಇದಕ್ಕೆ ಅಸ್ತು ಎಂದಿದೆ. ಈ ಸರಣಿಯನ್ನು ಮೊದಲು ಜನವರಿ 2023 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಈ ಸರಣಿಯನ್ನು 2024 ರ ಮೊದಲ ಮೂರು ತಿಂಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿಕೊಂಡಿದೆ.

ಈ ಮೂಲಕ ಪಿಸಿಬಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದ್ದು, 2024 ರಲ್ಲಿ ಕೆರಿಬಿಯನ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ವಕ್ತಾರರು ಹೇಳಿದ್ದಾರೆ. ಏಕೆಂದರೆ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್​ಗೆ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಆತಿಥ್ಯ ವಹಿಸಲಿದೆ. ಹೀಗಾಗಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಈ 3 ಪಂದ್ಯಗಳನ್ನು ಸರಣಿಯನ್ನು ಆಯೋಜನೆ ಮಾಡುವುದರೊಂದಿಗೆ ಟಿ20 ವಿಶ್ವಕಪ್​ಗೆ ತಯಾರಿ ಮಾಡಿಕೊಳ್ಳುವುದು ಪಿಸಿಬಿ ಯೋಜನೆಯಾಗಿದೆ.

2009 ರಿಂದ ಪ್ರಶಸ್ತಿ ಗೆದ್ದಿಲ್ಲ

2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್​ನಲ್ಲಿ ಫೈನಲ್‌ ತಲುಪಿದ್ದ ಪಾಕಿಸ್ತಾನ, ಭಾರತ ವಿರುದ್ಧ ಸೋತು ಪ್ರಶಸ್ತಿಯನ್ನು ಕಳೆದುಕೊಂಡಿತ್ತು. ಆದರೆ 2009ರಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವಕಪ್​ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ, ಆ ಬಳಿಕ ಪಾಕಿಸ್ತಾನ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಕಳೆದ ವರ್ಷ ವಿಶ್ವಕಪ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಸೆಮಿಫೈನಲ್‌ ತಲುಪಿದ್ದ ಪಾಕಿಸ್ತಾನ ತಂಡ ಆಸೀಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ