T20 World Cup 2022: ಟಿ20 ವಿಶ್ವಕಪ್ನಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶಕ್ಕೆ ಪರ್ತ್ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿದೆ. ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸುವ ಮೂಲಕ ಜಿಂಬಾಬ್ವೆ (Pakistan vs Zimbabwe) ತಂಡವು ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲೂ ಪಾಕ್ ಆಟಗಾರರು ಮಾಡಿದ ತಪ್ಪುಗಳೇ ಅವರ ಸೋಲಿಗೆ ಕಾರಣ ಎಂದು ಅಭಿಮಾನಿಗಳು ದೂಷಿಸಲಾರಂಭಿಸಿದ್ದಾರೆ. ಏಕೆಂದರೆ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಪಾಕಿಸ್ತಾನ್ ತಂಡವು ಉತ್ತಮ ಫೀಲ್ಡಿಂಗ್ ಮಾಡಿರಲಿಲ್ಲ. ಕಳಪೆ ಫೀಲ್ಡಿಂಗ್ ಮೂಲಕ ಮಾಡಿಕೊಂಡ ತಪ್ಪುಗಳಿಂದಾಗಿಯೇ ಇದೀಗ 1 ರನ್ನಿಂದ ಪಾಕ್ ಸೋತಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ಸ್ ಮ್ಯಾಚಸ್ ಎಂಬ ಮಾತಿದೆ. ಆದರೆ ಈ ಮಾತು ಪಾಕಿಸ್ತಾನ್ ತಂಡಕ್ಕೆ ಒಪ್ಪುವುದಿಲ್ಲ ಎಂಬುದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಸಾಬೀತಾಗಿದೆ. ಏಕೆಂದರೆ ಕೈ ಬಂದ 3 ಸುಲಭ ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಇದೀಗ ಬಾಬರ್ ಆಜಂ ಬಳಗ ಪಂದ್ಯವನ್ನೇ ಕೈ ಚೆಲ್ಲಿಕೊಂಡಿದೆ.
ಪಂದ್ಯದ 9ನೇ ಓವರ್‌ನಲ್ಲಿ ಶಾಹೀನ್ ಶಾ ಆಫ್ರಿದಿ ಎಸೆತದಲ್ಲಿ ಸೀನ್ ವಿಲಿಯಮ್ಸ್ ಮಿಡ್‌ವಿಕೆಟ್ ಕಡೆಗೆ ಶಾಟ್ ಬಾರಿಸಿದರು. ಅಲ್ಲೇ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ಇಫ್ತಿಕಾರ್ ಅಹ್ಮದ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಇದಾದ ಬಳಿಕ ಶಾದಾಬ್ ಖಾನ್ ಎಸೆದ 14ನೇ ಓವರ್‌ನಲ್ಲಿ ಮತ್ತೊಮ್ಮೆ ವಿಲಿಯಮ್ಸ್ ನೀಡಿದ ಕ್ಯಾಚ್ ಕೈಬಿಟ್ಟರು.
ಇನ್ನು ಪಂದ್ಯದ 19ನೇ ಓವರ್‌ನಲ್ಲಿ ರಿಯಾನ್ ಬರ್ಲ್ ನೀಡಿದ ಸುಲಭ ಕ್ಯಾಚ್ ಅನ್ನು ಡೀಪ್ ಮಿಡ್‌ವಿಕೆಟ್‌ನಲ್ಲಿ ಹೈದರ್ ಅಲಿ ಕೈಬಿಟ್ಟರು. ಹೀಗೆ ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಇದೀಗ ಪಾಕಿಸ್ತಾನ್ ಪಂದ್ಯವನ್ನೇ ಕೈಚೆಲ್ಲಿಕೊಂಡಿದೀರಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಅದರಲ್ಲೂ ಕಳಪೆ ಫೀಲ್ಡಿಂಗ್ಗೆ ಹೆಸರುವಾಸಿಯಾಗಿರುವ ಪಾಕಿಸ್ತಾನ್ ತಂಡವು ಹಲವು ಮಹತ್ವದ ಪಂದ್ಯಗಳಲ್ಲಿ ಕ್ಯಾಚ್ಗಳನ್ನು ಕೈಚೆಲ್ಲಿಕೊಂಡಿದೆ. ಕಳೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಮ್ಯಾಥ್ಯೂ ವೇಡ್ ನೀಡಿ ಕ್ಯಾಚ್ ಕೈಚೆಲ್ಲಿಕೊಂಡ ಪರಿಣಾಮ ಪಾಕ್ ತಂಡವು ಹೊರಬಿದ್ದಿತ್ತು. ಇದೀಗ ಜಿಂಬಾಬ್ವೆ ವಿರುದ್ದ ಕೂಡ ಕ್ಯಾಚ್ಗಳನ್ನು ಹಿಡಿಯಲು ವಿಫಲರಾಗಿದ್ದಾರೆ. ಹೀಗಾಗಿಯೇ ಇದೀಗ ಅಭಿಮಾನಿಗಳು ಪಾಕ್ ಆಟಗಾರರು ಕ್ಯಾಚ್ ಹಿಡಿಯುವುದನ್ನು ಕಲಿಯುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.
ಜಿಂಬಾಬ್ವೆಗೆ ಐತಿಹಾಸಿಕ ಜಯ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಈ ಸುಲಭ ಸವಾಲು ಬೆನ್ನತ್ತಿದ ಪಾಕ್ ತಂಡಕ್ಕೆ ಜಿಂಬಾಬ್ವೆ ತಂಡದ ಸಾಂಘಿಕ ಪ್ರದರ್ಶನ ಮುಳುವಾಯಿತು.
ಅತ್ಯುತ್ತಮ ಫೀಲ್ಡಿಂಗ್ ಹಾಗೂ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದ ಜಿಂಬಾಬ್ವೆ ತಂಡವು ಪಾಕ್ ತಂಡವನ್ನು 129 ರನ್ಗಳಿಗೆ ನಿಯಂತ್ರಿಸುವ ಮೂಲಕ 1 ರನ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿ ಪಾಕ್ ಪಡೆಗೆ ಸೋಲುಣಿಸಿದ ಖುಷಿಯಲ್ಲಿ ತೇಲಾಡಿದರು.