2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ 1 ಬೆಳ್ಳಿ ಮತ್ತು 5 ಕಂಚಿನ ಪದಕ ಸೇರಿದಂತೆ ಒಟ್ಟು 6 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಚಿನ್ನದ ಪದಕದ ಕನಸು ಮಾತ್ರ ನನಸಾಗಲಿಲ್ಲ. ಆದಾಗ್ಯೂ, ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಇನ್ನೂ ಜೀವಂತವಾಗಿದ್ದು, ಅದೇ ಪ್ಯಾರಿಸ್‌ನಲ್ಲಿ ಆಗಸ್ಟ್ 28 ರಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಚಿನ್ನ ಗೆಲುವ ಭರವಸೆ ಮೂಡಿಸಿದ್ದಾರೆ. ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ 207 ದೇಶಗಳಿಂದ ಸುಮಾರು 4400 ಅಥ್ಲೀಟ್‌ಗಳು ಭಾಗವಹಿಸಲಿದ್ದು, ವಿವಿದ ಕ್ರೀಡೆಗಳಲ್ಲಿ 549 ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ. ಇದೀಗ ಈ ಕ್ರೀಡಾಕೂಟಕ್ಕೆ ಭಾರತದ ತಂಡವೂ ಕೂಡ ಇಂದು ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದೆ.
ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ದೇವೇಂದ್ರ ಜಜಾರಿಯಾ ಮತ್ತು ಮಿಷನ್ ಮುಖ್ಯಸ್ಥ ಸತ್ಯ ಪ್ರಕಾಶ್ ಸಾಂಗ್ವಾನ್ ನೇತೃತ್ವದ 179 ಸದಸ್ಯರ ತಂಡ ( 84 ಸ್ಪರ್ಧಿಗಳು ಮತ್ತು ಅಧಿಕಾರಿಗಳು ಸೇರಿದಂತೆ) ಇಂದು ಪ್ಯಾರಿಸ್‌ಗೆ ತೆರಳಿದೆ. ಕೆಲವು ಆಟಗಾರರು ಪ್ಯಾರಿಸ್‌ನ ಹೊರಗೆ ಸ್ಪರ್ಧಿಸಲಿರುವುದರಿಂದ ಎಲ್ಲಾ ಆಟಗಾರರನ್ನು ನೋಡಿಕೊಳ್ಳಲು ಗೇಮ್ಸ್ ವಿಲೇಜ್‌ನ ಹೊರಗೆ ಉಳಿಯುವುದಾಗಿ ಜಜಾರಿಯಾ ಮಾಹಿತಿ ನೀಡಿದ್ದಾರೆ.
ಮೇಲೆ ಹೇಳಿದಂತೆ ಭಾರತದಿಂದ ಒಟ್ಟು 84 ಸ್ಪರ್ಧಿಗಳು ಭಾಗವಹಿಸಲಿದ್ದು, ಇನ್ನುಳಿದ 95 ಮಂದಿಯಲ್ಲಿ ವೈಯಕ್ತಿಕ ತರಬೇತುದಾರರು ಮತ್ತು ಅವರ ವಿಶೇಷ ಅಗತ್ಯಗಳನ್ನು ಪರಿಗಣಿಸಿ ಆಟಗಾರರ ಜೊತೆಯಲ್ಲಿರುವ ಸಹಾಯಕರು ಸಹ ಸೇರಿದ್ದಾರೆ. ಈ ರೀತಿಯಾಗಿ, ಭಾರತೀಯ ತುಕಡಿಯು ಒಟ್ಟು 179 ಸದಸ್ಯರನ್ನು ಒಳಗೊಂಡಿದೆ. ಈ 95 ಅಧಿಕಾರಿಗಳಲ್ಲಿ 77 ಮಂದಿ ತಂಡದ ಅಧಿಕಾರಿಗಳು, ಒಂಬತ್ತು ಮಂದಿ ತಂಡದ ವೈದ್ಯಕೀಯ ಅಧಿಕಾರಿಗಳು ಮತ್ತು ಒಂಬತ್ತು ಮಂದಿ ಇತರೆ ತಂಡದ ಅಧಿಕಾರಿಗಳು ಸೇರಿದ್ದಾರೆ. ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು 12 ಕ್ರೀಡೆಗಳಲ್ಲಿ ಭಾಗವಹಿಸಲಿದ್ದು, 84 ಆಟಗಾರರು ಪದಕಕ್ಕಾಗಿ ಸೆಣಸಾಡಲಿದ್ದಾರೆ.
2021ರಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಆಟಗಾರರು ಒಂಬತ್ತು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಇನ್ನು ತಂಡದ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯವು, ‘ಕೆಲವು ಪ್ಯಾರಾ ಆಟಗಾರರ ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ತಂಡದಲ್ಲಿ ಖಾಸಗಿ ಕೋಚ್ ಅನ್ನು ಸಹ ನೇಮಿಸಿದೆ. ಆದಾಗ್ಯೂ, ಅವರು ಮುಖ್ಯ ಮಿಷನ್/ಚೀಫ್ ಟೀಮ್ ಕೋಚ್‌ನ ಸೂಚನೆಗಳ ಪ್ರಕಾರ ಇತರ ಆಟಗಾರರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ. ಚೀಫ್ ಆಫ್ ಮಿಷನ್ ಮತ್ತು ಪ್ಯಾರಾ ಬ್ಯಾಡ್ಮಿಂಟನ್‌ನ ಒಬ್ಬ ತಂಡದ ವ್ಯವಸ್ಥಾಪಕರನ್ನು ಹೊರತುಪಡಿಸಿ ಇಡೀ ತಂಡ (ಆಟಗಾರರು, ತಂಡದ ಅಧಿಕಾರಿಗಳು, ತರಬೇತುದಾರರು) ಭಾಗವಹಿಸುವ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದೆ. ಇನ್ನು 2021 ರಲ್ಲಿ ನಡೆದಿದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು 19 ಪದಕಗಳನ್ನು (ಐದು ಚಿನ್ನ, ಎಂಟು ಬೆಳ್ಳಿ, ಆರು ಕಂಚು) ಗೆದ್ದಿತ್ತು. ಇದು ಇದುವರೆಗಿನ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Sun, 25 August 24