
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂಬರುವ ಹಣಕಾಸು ವರ್ಷಕ್ಕೆ 18.30 ಶತಕೋಟಿ (1830 ಕೋಟಿ ಪಾಕ್ ರೂ.) ಪಾಕಿಸ್ತಾನಿ ರೂಪಾಯಿಗಳ ಬಜೆಟ್ ಅನ್ನು ಅನುಮೋದಿಸಿದೆ. ಇದರಲ್ಲಿ, 1173 ಶತಕೋಟಿ ರೂ. ಅನ್ನು ಅಂತರರಾಷ್ಟ್ರೀಯ ಆಟಗಾರರ ಕೇಂದ್ರ ಒಪ್ಪಂದಗಳಿಗೆ ಮತ್ತು ರಿಟೈನರ್ಗಳಿಗೆ ಮೀಸಲಿಡಲಾಗಿದೆ. ಅಂದರೆ ಮುಂಬರುವ ಹಣಕಾಸು ವರ್ಷದಿಂದ ಪಾಕಿಸ್ತಾನ್ ಆಟಗಾರ ವೇತನ ಶೇ.37 ರಷ್ಟು ಹೆಚ್ಚಾಗಲಿದೆ.
ಅಷ್ಟೇ ಅಲ್ಲದೆ ಮುಂಬರುವ ಹಣಕಾಸು ವರ್ಷದಿಂದ ಪಾಕಿಸ್ತಾನ್ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿಯನ್ನು 25 ರಿಂದ 30 ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಸೆಂಟ್ರಲ್ ಕಾಂಟ್ರಾಕ್ಟ್ ಲಿಸ್ಟ್ನಲ್ಲಿ ಒಟ್ಟು 30 ಆಟಗಾರರನ್ನು ಪರಿಗಣಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
ಕುತೂಹಲಕಾರಿ ವಿಷಯ ಎಂದರೆ, ಪಾಕಿಸ್ತಾನ್ ಕ್ರಿಕೆಟ್ ತಂಡವು ಕಳೆದ ಒಂದು ವರ್ಷದಿಂದ ಅತ್ಯಂತ ಪ್ರದರ್ಶನ ನೀಡುತ್ತಿದೆ. ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವು ನಾಕೌಟ್ ಹಂತವನ್ನು ತಲುಪಲು ಸಹ ಸಾಧ್ಯವಾಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ, ಪಾಕಿಸ್ತಾನವು ಬಾಂಗ್ಲಾದೇಶ ವಿರುದ್ಧದ ತವರು ಸರಣಿಯನ್ನು ಕಳೆದುಕೊಂಡಿತು. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಯಶಸ್ವಿಯಾಗಿದ್ದರು. ಹೀಗೆ ಸತತ ಕಳಪೆ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದ ಪಾಕಿಸ್ತಾನ್ ಆಟಗಾರರ ವೇತನ ಹೆಚ್ಚಳಕ್ಕೆ ಪಿಸಿಬಿ ಮುಂದಾಗಿರುವುದು ವಿಶೇಷ.
ಒಂದೆಡೆ ರಾಷ್ಟ್ರೀಯ ತಂಡದ ಆಟಗಾರರ ವೇತನ ಹೆಚ್ಚಳಕ್ಕೆ ಮುಂದಾಗಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್, ದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದೆ. ಏಕೆಂದರೆ ದೇಶೀಯ ಕ್ರಿಕೆಟ್ ಆಟಗಾರರ ಆದಾಯವನ್ನು ಕಡಿತಗೊಳಿಸಲಾಗಿದೆ. ದೇಶೀಯ ಒಪ್ಪಂದಗಳ ಬಜೆಟ್ ಅನ್ನು ಸಹ ಸುಮಾರು 34% ರಷ್ಟು ಕಡಿಮೆ ಮಾಡಲಾಗಿದೆ.
ಈ ಹಿಂದೆ ದೇಶೀಯ ಟೂರ್ನಿ ಆಡುವ ಆಟಗಾರರಿಗೆ 684 ಮಿಲಿಯನ್ ಪಾಕಿಸ್ತಾನ್ ರೂ. ಬಜೆಟ್ ಘೋಷಿಸಲಾಗಿತ್ತು. ಆದರೆ ಈ ಬಾರಿ ಅದನ್ನು 450 ಮಿಲಿಯನ್ PKR ಗೆ ಇಳಿಸಲಾಗಿದೆ. ಅಷ್ಟೇ ಅಲ್ಲದೆ ದೇಶೀಯ ಟೂರ್ನಿ ಆಡುವ ತಂಡಗಳ ಸಂಖ್ಯೆಯನ್ನು 8 ಕ್ಕೆ ಇಳಿಸಿದೆ. ಇದರ ಜೊತೆಗೆ ಕಳೆದ ವರ್ಷ ಪ್ರಾರಂಭವಾದ ಚಾಂಪಿಯನ್ಸ್ ಕಪ್ ಟೂರ್ನಿಯನ್ನು ಸಹ ರದ್ದುಗೊಳಿಸಲಾಗಿದೆ. ಅಂದರೆ ದೇಶೀಯ ಕ್ರಿಕೆಟ್ಗೆ ಬಂಡವಾಳ ಹೂಡದೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ತಂಡದ ವೇತನ ಹೆಚ್ಚಿಸಲು ಮುಂದಾಗಿರುವುದು ಅಚ್ಚರಿಯೇ ಸರಿ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್, ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಕೇಂದ್ರ ಒಪ್ಪಂದ ಹೊಂದಿರುವ ಮಹಿಳಾ ಆಟಗಾರ್ತಿಯರ ಸಂಖ್ಯೆಯನ್ನು 16 ರಿಂದ 24 ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಮಹಿಳಾ ಆಟಗಾರ್ತಿಯರ ಒಪ್ಪಂದಗಳ ಮೌಲ್ಯವನ್ನು 121% ರಷ್ಟು ಏರಿಕೆ ಮಾಡಲಾಗಿದೆ. ಇನ್ನು ದೇಶೀಯ ಮಹಿಳಾ ಕ್ರಿಕೆಟ್ ಬಜೆಟ್ನಲ್ಲೂ 4% ರಷ್ಟು ಅಲ್ಪ ಏರಿಕೆಯಾಗಿದೆ.
ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ
ಇನ್ನು ಮುಂದಿನ ಹಣಕಾಸು ವರ್ಷದ ಬಜೆಟ್ನಲ್ಲಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 12 ಪ್ರಥಮ ದರ್ಜೆ ಮೈದಾನಗಳ ನಿರ್ವಹಣೆಗಾಗಿ 93.6 ಮಿಲಿಯನ್ ಪಿಕೆಆರ್ ಮೀಸಲಿಟ್ಟಿದೆ. ಇದರ ಜೊತೆಗೆ, ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು PKR 6 ಬಿಲಿಯನ್ ಖರ್ಚು ಮಾಡಲಾಗುವುದು ಎಂದು ತಿಳಿಸಿದೆ.