‘ಭಾರತ ಸರ್ಕಾರ ಅನುಮತಿಸದಿದ್ದರೆ’..; ಬಿಸಿಸಿಐ ಬಳಿ ಲಿಖಿತ ದಾಖಲೆ ಕೇಳಿದ ಪಾಕ್ ಕ್ರಿಕೆಟ್ ಮಂಡಳಿ

|

Updated on: Jul 15, 2024 | 5:13 PM

Champions Trophy 2025: ಬಿಸಿಸಿಐನ ಈ ನಿರ್ಧಾರಕ್ಕೆ ಟಕ್ಕರ್ ನೀಡಲು ಮುಂದಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ 2026 ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

‘ಭಾರತ ಸರ್ಕಾರ ಅನುಮತಿಸದಿದ್ದರೆ’..; ಬಿಸಿಸಿಐ ಬಳಿ ಲಿಖಿತ ದಾಖಲೆ ಕೇಳಿದ ಪಾಕ್ ಕ್ರಿಕೆಟ್ ಮಂಡಳಿ
ಭಾರತ- ಪಾಕಿಸ್ತಾನ
Follow us on

2025 ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಟೂರ್ನಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಐಸಿಸಿಗೆ ಕರಡು ವೇಳಾಪಟ್ಟಿಯನ್ನೂ ಸಲ್ಲಿಸಿದೆ. ಈ ಕರಡು ಪ್ರತಿಯ ಪ್ರಕಾರ ಭಾರತದ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ. ಆದರೆ ಎಎನ್‌ಐ ವರದಿ ಪ್ರಕಾರ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳದಿದ್ದರೆ ಅಥವಾ ಭಾರತ ತಂಡವನ್ನು ಕಳುಹಿಸಲು ಭಾರತ ಸರ್ಕಾರ ಒಪ್ಪದಿದ್ದರೆ ಈ ಬಗ್ಗೆ ಲಿಖಿತ ಪುರಾವೆಯನ್ನು ಬಿಸಿಸಿಐ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಲಿಖಿತ ಪುರಾವೆ ಬೇಕು

ಮುಂದಿನ ಚಾಂಪಿಯನ್ಸ್ ಟ್ರೋಫಿಯನ್ನು ಬರುವ ವರ್ಷ ಅಂದರೆ 2025 ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆಯೋಜಿಸಲು ನಿರ್ಧರಿಸಿದೆ. ಹೀಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ನಿರಾಕರಿಸಿದರೆ, ಈ ಸಂಬಂಧ ನಮಗೆ ಲಿಖಿತ ಪುರಾವೆ ಬೇಕು ಮತ್ತು ಈ ಪುರಾವೆಯನ್ನು ಬಿಸಿಸಿಐ, ಐಸಿಸಿಗೆ ಸಲ್ಲಿಸಬೇಕು. ಅದರಲ್ಲೂ ಈ ಲಿಖಿತ ಪುರಾವೆಯನ್ನು ಟೂರ್ನಿ ಆರಂಭಕ್ಕೆ ಇನ್ನು ಐದಾರು ತಿಂಗಳು ಇರುವ ಮುಂಚೆಯೇ ನೀಡಬೇಕು ಎಂದು ಪಿಸಿಬಿ ಒತ್ತಾಯಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಸುಳ್ಳು ವದಂತಿಗಳು

ವಾಸ್ತವವಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಬಗ್ಗೆ ಭಾರತ ಸರ್ಕಾರವಾಗಲಿ ಅಥವಾ ಬಿಸಿಸಿಐ ಆಗಲಿ ಯಾವುದೇ ಚರ್ಚೆಯನ್ನು ಇದುವರೆಗೆ ನಡೆಸಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದರು. ಅದಾಗ್ಯೂ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವ ಬದಲಿಗೆ, ಈ ಪಂದ್ಯಾವನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕು ಎಂದು ಬಿಸಿಸಿಐ ಕೇಳಿಕೊಂಡಿದೆ ಎಂದು ವರದಿಯಾಗಿದೆ.

ಹೈಬ್ರಿಡ್ ಮಾದರಿ

ಅಂದರೆ ಭಾರತದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಬೇಕು ಎಂದು ಬಿಸಿಸಿಐ, ಐಸಿಸಿ ಬಳಿ ಮನವಿ ಮಾಡಿದ ಎಂದು ವರದಿಯಾಗಿದೆ. 2023ರಲ್ಲಿ ನಡೆದಿದ್ದ ಏಷ್ಯಾಕಪ್​ ಕೂಡ ಇದೇ ಮಾದರಿಯಲ್ಲಿ ನಡೆದಿತ್ತು. ಅದರಂತೆ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂಬುದು ಬಿಸಿಸಿಐ ವಾದವಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ನಾವು ಕಳುಹಿಸುವುದಿಲ್ಲ

ಹೀಗಾಗಿ ಬಿಸಿಸಿಐನ ಈ ನಿರ್ಧಾರಕ್ಕೆ ಟಕ್ಕರ್ ನೀಡಲು ಮುಂದಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ 2026 ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ. ಜಿಯೋ ನ್ಯೂಸ್ ಪ್ರಕಾರ, ಪಿಸಿಬಿ ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವ ಬಗ್ಗೆ ಅಚಲವಾಗಿದ್ದು, ಜುಲೈ 19 ರಿಂದ 22 ರ ನಡುವೆ ಕೊಲಂಬೊದಲ್ಲಿ ನಡೆಯಲ್ಲಿರುವ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ಯಾವುದೇ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ವಿರೋಧಿಸುವ ಬಗ್ಗೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ