ಕಳೆದದೊಂದು ವರ್ಷದಿಂದ ತನ್ನ ಆಟದಿಂದ ಹೆಚ್ಚಾಗಿ ಮಂಡಳಿಯೊಳ್ಳಗಿನ ವಿವಾದಗಳಿಂದಲೇ ಸಾಕಷ್ಟು ಸುದ್ದಿಯಲ್ಲಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಇದೀಗ ತನ್ನ ತಂಡದ ನಿರ್ದೇಶಕನನ್ನು ಕಿತ್ತೊಗೆಯುವ ಮೂಲಕ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಕೆಲವು ತಿಂಗಳ ಹಿಂದೆ ಪಾಕ್ ಮಂಡಳಿ ನಿದೇರ್ಶಕರಾಗಿ ಆಯ್ಕೆಯಾಗಿದ್ದ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ರನ್ನು (Mohammad Hafeez) ಇದೀಗ ಆ ಸ್ಥಾನದಿಂದ ತೆಗೆದುಹಾಕಲಾಗಿದೆ. ಕೇವಲ ಎರಡೇ ಎರಡು ಸರಣಿಗಳಲ್ಲಿ ತಂಡದ ನಿದೇರ್ಶಕರಾಗಿದ್ದ ಹಫೀಜ್ ಅವರ ಆಡಳಿತಾವಧಿಯಲ್ಲಿ ಪಾಕ್ ತಂಡ ಒಂದೇ ಒಂದು ಸರಣಿ ಜಯಿಸಲಿಲ್ಲ. ಅಲ್ಲದೆ ನಿರ್ದೇಶಕ ಹಫೀಜ್ ಹಾಗೂ ಆಟಗಾರರ ನಡುವಿನ ವೈಮನಸ್ಸು ಕೂಡ ಪಾಕ್ ಕ್ರಿಕೆಟ್ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಹೀಗಾಗಿ ಹಫೀಜ್ ತಲೆದಂಡವಾಗಿದೆ.
ಹಫೀಜ್ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ತಂಡ ಪ್ರಮುಖವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಸೋಲನ್ನು ಎದುರಿಸಬೇಕಾಯಿತು. ಆ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4-1 ಅಂತರದಿಂದ ಸೋತಿತ್ತು. ಸರಣಿ ಸೋಲಿನ ಜೊತೆಗೆ ತಂಡದ ಆಯ್ಕೆ ಸೇರಿದಂತೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರಿಗೆ ಪದೇಪದೇ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಹಾಗೂ ಮಾಜಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.
ಪಾಕ್ ಕ್ರಿಕೆಟ್ ಕೇಂದ್ರ ಒಪ್ಪಂದದಿಂದ ವೇಗಿ ಹ್ಯಾರಿಸ್ ರೌಫ್ ಕಿಕ್ ಔಟ್..!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮೊಹಮ್ಮದ್ ಹಫೀಜ್ ಅವರನ್ನು ತಂಡದ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದು, ‘ನಿರ್ದೇಶಕರಾಗಿ ಮೊಹಮ್ಮದ್ ಹಫೀಜ್ ಅವರ ಕಾರ್ಯವೈಖರಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಧನ್ಯವಾದಗಳನ್ನು ತಿಳಿಸುತ್ತದೆ. ಮೊಹಮ್ಮದ್ ಹಫೀಜ್ ಅವರು ಕ್ರಿಕೆಟ್ ನಿರ್ದೇಶಕ ಹುದ್ದೆಯನ್ನು ಅಲಂಕರಿಸುವ ಮೂಲಕ ಪಾಕಿಸ್ತಾನ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಫೀಜ್ ಅವರ ಕಠಿಣ ಪರಿಶ್ರಮ ಎಲ್ಲಾ ಆಟಗಾರರಿಗೆ ಸ್ಫೂರ್ತಿ ನೀಡಿದೆ. ಈ ಹುದ್ದೆಯಲ್ಲಿದ್ದಾಗ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಹಫೀಜ್ ಮಹತ್ವದ ಕೊಡುಗೆ ನೀಡಿದ್ದಾರೆ. ಹಫೀಜ್ ಅವರ ಭವಿಷ್ಯಕ್ಕಾಗಿ ಮಂಡಳಿಯು ಶುಭ ಹಾರೈಸುತ್ತದೆ ಎಂದು ಬರೆದುಕೊಂಡಿದೆ.
The Pakistan Cricket Board extends heartfelt gratitude to Mohammad Hafeez, Director Pakistan men’s cricket team, for his invaluable contributions. Hafeez’s passion for the game has inspired players and his mentorship during the tour of Australia and New Zealand have been of… pic.twitter.com/AM4IKbm0vB
— Pakistan Cricket (@TheRealPCB) February 15, 2024
ಪಾಕಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಸುದೀರ್ಘ ಕಾಲದಿಂದಲೂ ತಮ್ಮ ಆಟದ ಮೂಲಕ ಪಾಕಿಸ್ತಾನ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಫೀಜ್ ಪಾಕಿಸ್ತಾನ ಪರ 55 ಟೆಸ್ಟ್, 218 ಏಕದಿನ ಮತ್ತು 119 ಟಿ20 ಪಂದ್ಯಗಳನ್ನು ಆಡಿದ್ದಾರೆ. ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಹಫೀಜ್‌ನ ಸುದೀರ್ಘ ಸಭೆಗಳಿಂದಾಗಿ, ಪ್ರಸ್ತುತ ಪಾಕಿಸ್ತಾನಿ ತಂಡದ ಅನೇಕ ಆಟಗಾರರು ಅಸಮಾಧಾನಗೊಂಡಿದ್ದರು. ಅಲ್ಲದೆ ಈ ಬಗ್ಗೆ ಮಂಡಳಿಗೆ ದೂರು ಸಹ ನೀಡಿದ್ದಾರೆ ಎಂದು ವರದಿಯಾಗಿತ್ತು. ಹಫೀಜ್ರನ್ನು ನಿದೇರ್ಶಕ ಹುದ್ದೆಯಿಂದ ತೆಗೆದುಹಾಕುವುದರೊಂದಿಗೆ ಆಸ್ಟ್ರೇಲಿಯಾ ಪ್ರವಾಸದಿಂದ ಹೆಸರನ್ನು ಹಿಂಪಡೆದಿದ್ದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ