30 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ನೆಲದಲ್ಲಿ ಐಸಿಸಿ (ICC) ಟೂರ್ನಿ ನಡೆಸಲು ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ವಾಸ್ತವವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025 ರಲ್ಲಿ (Champions Trophy 2025) ಪಾಕಿಸ್ತಾನದಲ್ಲಿ ನಡೆಯಲಿದ್ದು, ಇದರಲ್ಲಿ ವಿಶ್ವ ಕ್ರಿಕೆಟ್‌ನ ಅಗ್ರ-8 ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಪಿಸಿಬಿ ಐಸಿಸಿಗೆ ತನ್ನ ಯೋಜನೆಯನ್ನು ಕಳುಹಿಸಿದ್ದು, ಅದರಲ್ಲಿ ಪಂದ್ಯಗಳನ್ನು ಆಯೋಜಿಸಲು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯನ್ನು (Lahore, Karachi and Rawalpindi) ಆಯ್ಕೆ ಮಾಡಿದೆ. ಈ ಟೂರ್ನಿಯ ಪಂದ್ಯಗಳು ಮುಂದಿನ ವರ್ಷ ಫೆಬ್ರವರಿ ತಿಂಗಳ ಸುಮಾರಿಗೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕೂಡ ಈ ಮೂರು ನಗರಗಳ ಸ್ಟೇಡಿಯಂಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ.
ಪ್ರಸ್ತುತ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹೇಳಿಕೆಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ನಾವು ಪಂದ್ಯಗಳ ವೇಳಾಪಟ್ಟಿಯ ಯೋಜನೆಯನ್ನು ಐಸಿಸಿಗೆ ಕಳುಹಿಸಿದ್ದೇವೆ. ಅಲ್ಲದೆ ಐಸಿಸಿ ಭದ್ರತಾ ತಂಡ ಈಗಾಗಲೇ ಇಲ್ಲಿಗೆ ಭೇಟಿ ನೀಡಿತ್ತು. ಆ ವೇಳೆ ನಾವು ಕೂಡ ಅವರೊಂದಿಗೆ ಸಭೆ ನಡೆಸಿದ್ದೇವು. ಇಲ್ಲಿನ ಸಿದ್ಧತೆಗಳನ್ನು ನೋಡಿದ ಅವರು, ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವ ನಮ್ಮ ಯೋಜನೆ ಬಗ್ಗೆಯೂ ತಿಳಿಸಿದರು. ನಾವು ಐಸಿಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಪಾಕಿಸ್ತಾನವು ಈ ಪಂದ್ಯಾವಳಿಯನ್ನು ಉತ್ತಮ ರೀತಿಯಲ್ಲಿ ಆಯೋಜಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಎಂದು ವರದಿಯಾಗಿದೆ.
T20 World Cup 2024: ಯುವರಾಜ್ ಸಿಂಗ್ಗೆ ಮಹತ್ವದ ಜವಾಬ್ದಾರಿ ವಹಿಸಿದ ಐಸಿಸಿ..!
ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಹೆಸರಿಸಿರುವ ಮೂರು ಕ್ರೀಡಾಂಗಣಗಳ ಸ್ಥಿತಿ ಪ್ರಸ್ತುತ ಉತ್ತಮವಾಗಿಲ್ಲ ಎಂದು ಸ್ವತಃ ನಖ್ವಿ ಅವರೇ ಹೇಳಿದ್ದಾರೆ. ಗಡಾಫಿ ಕ್ರೀಡಾಂಗಣವನ್ನು ನೋಡಿದರೆ ಸದ್ಯ ಈ ಕ್ರೀಡಾಂಗಣ ಕ್ರಿಕೆಟ್ ಆಡಲು ಸೂಕ್ತವಾಗಿಲ್ಲ. ಇಲ್ಲಿ ಫುಟ್ಬಾಲ್ ಆಡಬಹುದೇ ಹೊರತು ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ಸುಧಾರಿಸಬೇಕು. ಕರಾಚಿ ಕ್ರೀಡಾಂಗಣದ ಸ್ಥಿತಿಯೂ ಹದಗೆಟ್ಟಿದೆ. ಹೀಗಾಗಿ ಮೇ 7ರಂದು ಅಂತಾರಾಷ್ಟ್ರೀಯ ಕಂಪನಿಗಳ ನಡುವೆ ಬಿಡ್ಡಿಂಗ್ ನಡೆಸಿ ಕ್ರೀಡಾಂಗಣವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
1996 ರ ವಿಶ್ವಕಪ್ ನಂತರ ಪಾಕಿಸ್ತಾನ ತನ್ನ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಸಜ್ಜಾಗಿದೆ. ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದಾಗ್ಯೂ, ಅದರ ಹೋಸ್ಟಿಂಗ್ ಬಗ್ಗೆ ಇನ್ನೂ ಅನುಮಾನವಿದೆ. ವರದಿಯ ಪ್ರಕಾರ, ಜುಲೈನಲ್ಲಿ ನಡೆಯಲಿರುವ ಐಸಿಸಿ ಜನರಲ್ ಬಾಡಿ ಮೀಟಿಂಗ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ವೇಳಾಪಟ್ಟಿಯನ್ನು ಅನುಮೋದಿಸಲಾಗುವುದು. ಆದರೆ, ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು 2023 ರಲ್ಲಿ ನಡೆದ ಏಷ್ಯಾಕಪ್ ಅನ್ನು ಸಹ ಈ ಕಾರಣದಿಂದಾಗಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Mon, 29 April 24