IND vs BAN: ಬಾಂಗ್ಲಾದೇಶ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
Bangladesh Women vs India Women: ಬಾಂಗ್ಲಾದೇಶ್ ಮಹಿಳಾ ತಂಡದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಸಿಲ್ಹೆಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರನ್ನು 45 ರನ್ಗಳಿಂದ ಸೋಲಿಸಿ ಟೀಮ್ ಇಂಡಿಯಾ ವನಿತೆಯರು ಗೆಲುವಿನ ನಗೆ ಬೀರಿದ್ದಾರೆ.
ಬಾಂಗ್ಲಾದೇಶ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಸಿಲ್ಹೆಟ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (9) 3ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶಫಾಲಿ ವರ್ಮಾ (31) ಹಾಗೂ ಯಾಸ್ತಿಕಾ ಭಾಟಿಯಾ (36) ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 30 ರನ್ಗಳ ಕೊಡುಗೆ ನೀಡಿದರೆ, ರಿಚಾ ಘೋಷ್ 23 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿತು.
148 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ರೇಣುಕಾ ಸಿಂಗ್ ಯಶಸ್ವಿಯಾದರು. ಮೊದಲ ಓವರ್ನ 3ನೇ ಎಸೆತದಲ್ಲಿ ದಿಲಾರಾ (4) ವಿಕೆಟ್ ಪಡೆದರೆ, 5ನೇ ಓವರ್ನಲ್ಲಿ ಸೋಭಾನ ಮೊಸ್ತರಿ (6) ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಮುರ್ಷಿದಾ ಖಾತುನ್ (13) ಗೆ ದೀಪ್ತಿ ಶರ್ಮಾ ಪೆವಿಲಿಯನ್ ಹಾದಿ ತೋರಿಸಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ನಿಗರ್ ಸುಲ್ತಾನ 48 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 51 ರನ್ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಪೂಜಾ ವಸ್ತ್ರಾಕರ್, ನೀಗರ್ ಸುಲ್ತಾನ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಆ ಬಳಿಕ ಟೀಮ್ ಇಂಡಿಯಾ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 101 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 44 ರನ್ಗಳ ಜಯ ಸಾಧಿಸಿದೆ. ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ದಿಲಾರಾ ಅಕ್ಟರ್ , ಮುರ್ಷಿದಾ ಖಾತುನ್ , ಶೋರ್ನಾ ಅಕ್ಟರ್ , ನಿಗರ್ ಸುಲ್ತಾನಾ (ನಾಯಕಿ) , ಫಾಹಿಮಾ ಖಾತುನ್ , ರಬೇಯಾ ಖಾನ್ , ಸೋಭಾನಾ ಮೊಸ್ಟರಿ , ನಹಿದಾ ಅಕ್ಟರ್ , ಸುಲ್ತಾನಾ ಖಾತುನ್ , ಮಾರುಫಾ ಅಕ್ಟರ್ , ಫರಿಹಾ ತ್ರಿಸ್ನಾ.
ಇದನ್ನೂ ಓದಿ: IPL 2024: ಟೀಮ್ ಇಂಡಿಯಾದ ವಿಶ್ವ ದಾಖಲೆ ಮುರಿದ CSK
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಯಾಸ್ತಿಕಾ ಭಾಟಿಯಾ , ದೀಪ್ತಿ ಶರ್ಮಾ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಎಸ್ ಸಜನಾ , ರಿಚಾ ಘೋಷ್ (ವಿಕೆಟ್ ಕೀಪರ್) , ಪೂಜಾ ವಸ್ತ್ರಾಕರ್ , ಶ್ರೇಯಾಂಕಾ ಪಾಟೀಲ್ , ರೇಣುಕಾ ಠಾಕೂರ್ ಸಿಂಗ್ , ರಾಧಾ ಯಾದವ್.
Published On - 12:40 pm, Mon, 29 April 24