PAK vs BAN: ಮುಜುಗರದಿಂದ ತಪ್ಪಿಸಿಕೊಳ್ಳಲು ಟೆಸ್ಟ್ ಪಂದ್ಯವನ್ನು ಸ್ಥಳಾಂತರಿಸಿದ ಪಾಕ್ ಕ್ರಿಕೆಟ್ ಮಂಡಳಿ

|

Updated on: Aug 18, 2024 | 7:06 PM

PAK vs BAN: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕರಾಚಿ ಬದಲಿಗೆ ರಾವಲ್ಪಿಂಡಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದೆ. ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಸಿಬಿ ಹೇಳಿದೆ. ಎರಡನೇ ಟೆಸ್ಟ್ ಆಗಸ್ಟ್ 30 ರಿಂದ ನಡೆಯಲಿದೆ.

PAK vs BAN: ಮುಜುಗರದಿಂದ ತಪ್ಪಿಸಿಕೊಳ್ಳಲು ಟೆಸ್ಟ್ ಪಂದ್ಯವನ್ನು ಸ್ಥಳಾಂತರಿಸಿದ ಪಾಕ್ ಕ್ರಿಕೆಟ್ ಮಂಡಳಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
Follow us on

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಇದೇ ಆಗಸ್ಟ್ 21 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಜುಗರದಿಂದ ಪಾರಾಗಲು ಎರಡನೇ ಟೆಸ್ಟ್ ಪಂದ್ಯವನ್ನು ಸ್ಥಳಾಂತರಿಸಿದೆ. ವಾಸ್ತವವಾಗಿ 2025 ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿದೆ. ಹೀಗಾಗಿ ಐಸಿಸಿ ಟೂರ್ನಿಯನ್ನು ಯಾವುದೇ ಕೊರತೆಗಳಿಲ್ಲದಂತೆ ಆಯೋಜಿಸಲು ಮುಂದಾಗಿರುವ ಪಿಸಿಬಿ, ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸುತ್ತಿರುವ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಕರಾಚಿ ಕ್ರೀಡಾಂಗಣವನ್ನು ನವೀಕರಿಸುತ್ತಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಪಿಸಿಬಿ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯನ್ನು ಪ್ರೇಕ್ಷಕರಿಲ್ಲದೆ ನಡೆಸಲು ತೀರ್ಮಾನಿಸಿತ್ತು. ಆದರೆ ಪಿಸಿಬಿಯ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾದ ನಂತರ, ಇದೀಗ ಪಿಸಿಬಿ ಈ ಪಂದ್ಯವನ್ನು ಬೇರೆಡೆ ಆಯೋಜಿಸಲು ಮುಂದಾಗಿದೆ.

15 ರೂ.ಗೆ ಕ್ರೀಡಾಂಗಣದ ಟಿಕೆಟ್

ವಾಸ್ತವವಾಗಿ ಕೆಲವು ದಿನಗಳ ಹಿಂದೆ, ಪಿಸಿಬಿ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಕೇವಲ 50 ಪಾಕಿಸ್ತಾನಿ ರೂಪಾಯಿಗಳಿಗಳಿಗೆ (ಭಾರತದಲ್ಲಿ 15 ರೂಪಾಯಿ) ಟಿಕೆಟ್‌ಗಳನ್ನು ನೀಡುವುದಾಗಿ ಪ್ರಕಟಿಸಿತ್ತು ಇದರಿಂದಲಾದರೂ ಜನರು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರಬಹುದು ಎಂಬುದು ಪಾಕ್ ಮಂಡಳಿಯ ಈ ನಿರ್ಧಾರದ ಹಿಂದೆ ಇದ್ದ ಉದ್ದೇಶವಾಗಿತ್ತು. ಪಾಕ್ ಮಂಡಳಿಯ ಈ ನಿರ್ಧಾರಕ್ಕೆ ಕಾರಣವೂ ಇದ್ದು ಕಳೆದ 2-3 ವರ್ಷಗಳಿಂದ ಕರಾಚಿಯಲ್ಲಿ ನಡೆದ ಪಾಕಿಸ್ತಾನ ತಂಡ ಹಾಗೂ ಪಿಎಸ್‌ಎಲ್‌ ಪಂದ್ಯಗಳಲ್ಲಿ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಇದರಿಂದ ಪಿಸಿಬಿ ಭಾರಿ ಮುಖಭಂಗಕ್ಕೊಳಗಾಗಿತ್ತು.

ಪಂದ್ಯ ಬೇರೆಡೆಗೆ ಸ್ಥಳಾಂತರ

ಆದರೆ ಈ ಅಚ್ಚರಿಯ ನಿರ್ಧಾರ ತೆಗೆದುಕೊಂಡ ಕೆಲವೇ ದಿನಗಳ ನಂತರ ಪಿಸಿಬಿ, ಈ ನಿರ್ಧಾರವನ್ನು ರದ್ದುಗೊಳಿಸಿ, ಪ್ರೇಕ್ಷಕರು ಇಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸಲು ನಿರ್ಧರಿಸಿತ್ತು. ಮೇಲೆ ಹೇಳಿದಂತೆ ಈ ನಿರ್ಧಾರಕ್ಕೆ ಕಾರಣವನ್ನೂ ನೀಡಿದ್ದ ಪಿಸಿಬಿ, ಚಾಂಪಿಯನ್ಸ್ ಟ್ರೋಫಿಗಾಗಿ ಕ್ರೀಡಾಂಗಣದಲ್ಲಿ ನವೀಕರಣ ಕೆಲಸ ನಡೆಯುತ್ತಿರುವುದರಿಂದ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವುದಾಗಿ ಪಿಸಿಬಿ ಹೇಳಿತ್ತು. ಇದಕ್ಕೆ ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ಆಡಿದರೆ ಪಾಕಿಸ್ತಾನ ಕ್ರಿಕೆಟ್‌ಗೆ ಅವಮಾನ ಮಾಡಿದಂತಾಗುತ್ತದೆ ಎಂದಿದ್ದರು. ಇದೀಗ ಪಿಸಿಬಿ ಕೂಡ ಇದನ್ನು ಮನಗಂಡಿದ್ದು, ಪಂದ್ಯದ ಸ್ಥಳವನ್ನು ಬದಲಾಯಿಸಲು ನಿರ್ಧರಿಸಿದೆ.

ಭಾನುವಾರ, ಆಗಸ್ಟ್ 18 ರಂದು, ಮಂಡಳಿಯು ಕರಾಚಿ ಬದಲಿಗೆ ರಾವಲ್ಪಿಂಡಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದೆ. ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಸಿಬಿ ಹೇಳಿದೆ. ಎರಡನೇ ಟೆಸ್ಟ್ ಆಗಸ್ಟ್ 30 ರಿಂದ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯವೂ ರಾವಲ್ಪಿಂಡಿಯಲ್ಲಿ ನಡೆಯಲಿರುವ ಕಾರಣ ಎರಡನೇ ಟೆಸ್ಟ್‌ಗಾಗಿ ಹೊಸ ಸ್ಥಳದಲ್ಲಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿಲ್ಲ ಎಂಬುದು ಪಾಕಿಸ್ತಾನಿ ಮಂಡಳಿಗೆ ಸಿಕ್ಕಿರುವ ಏಕೈಕ ಸಮಾಧಾನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Sun, 18 August 24