ODI World Cup 2023: ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನದ ಹೊಸ ಡಿಮ್ಯಾಂಡ್..!

| Updated By: ಝಾಹಿರ್ ಯೂಸುಫ್

Updated on: Jul 10, 2023 | 10:59 PM

ICC World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ODI World Cup 2023: ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನದ ಹೊಸ ಡಿಮ್ಯಾಂಡ್..!
Pakistan Team
Follow us on

ODI World Cup 2023: ಏಕದಿನ ವಿಶ್ವಕಪ್​ಗಾಗಿ ಭಾರತದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 19 ಕ್ಕೆ ನಡೆಯಲಿದೆ. ಈಗಾಗಲೇ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ಇದಾಗ್ಯೂ ಪಾಕಿಸ್ತಾನ್ ತಂಡವು ಟೂರ್ನಿಯಲ್ಲಿ ಭಾಗವಹಿಸುವುದನ್ನು ಇನ್ನೂ ಕೂಡ ದೃಢಪಡಿಸಿಲ್ಲ. ಅಲ್ಲದೆ ಮುಂಬರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಡರ್ಬನ್​ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಕಿಸ್ತಾನ್ ಹೊಸ ಡಿಮ್ಯಾಂಡ್​ ಮುಂದಿಡಲಿದೆ ಎಂಬ ವಿಷಯ ಬಹಿರಂಗವಾಗಿದೆ.  ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಝರಿ, ಏಕದಿನ ವಿಶ್ವಕಪ್​ನಲ್ಲಿ ಪಾಕ್ ತಂಡ ಭಾಗವಹಿಸಬೇಕಿದ್ದರೆ ತಟಸ್ಥ ಸ್ಥಳದಲ್ಲಿ ಪಂದ್ಯವನ್ನು ಆಯೋಜಿಸಬೇಕೆಂದು ತಿಳಿಸಿದ್ದಾರೆ.

ಹೊಸ ಡಿಮ್ಯಾಂಡ್:

ಪಾಕಿಸ್ತಾನ್ ತಂಡವು ಏಕದಿನ ವಿಶ್ವಕಪ್​ನಲ್ಲಿ ಭಾಗವಹಿಸಬೇಕಿದ್ದರೆ, ಪಾಕ್ ತಂಡದ ಪಂದ್ಯಗಳನ್ನು ಭಾರತದ ಹೊರಗೆ ಆಯೋಜಿಸಬೇಕು. ಅಂದರೆ ಶ್ರೀಲಂಕಾ ಅಥವಾ ಬಾಂಗ್ಲಾದೇಶ್​ಗಳಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸಿದರೆ ಮಾತ್ರ ಪಾಕಿಸ್ತಾನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಐಸಿಸಿ ಸಭೆಯಲ್ಲಿ ಈ ಹೊಸ ಡಿಮ್ಯಾಂಡ್​ ಅನ್ನು  ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷ ಝಾಕಾ ಅಶ್ರಫ್ ಪ್ರಸ್ತಾಪಿಸಲಿದ್ದಾರೆ.

ಸೇಡು ತೀರಿಸಿಕೊಳ್ಳಲು ಪಿಸಿಬಿ ಪ್ಲ್ಯಾನ್:

ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿತ್ತು. ಆದರೆ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಅಲ್ಲದೆ ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕೆಂದು ಬಿಸಿಸಿಐ ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)​ ಅನ್ನು ಒತ್ತಾಯಿಸಿತು. ಈ ಕೋರಿಕೆಗೆ ಮಣಿದ ಎಸಿಸಿ ಈ ಬಾರಿಯ ಏಷ್ಯಾಕಪ್ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ನಡೆಸಲು ತೀರ್ಮಾನಿಸಿದೆ. ಅದರಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜನೆಗೊಳ್ಳಲಿದೆ.

ಇದೀಗ ಇದೇ ಮಾದರಿಯಲ್ಲಿ ಐಸಿಸಿ ಮುಂದೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒತ್ತಾಯ ಹೇರಲು ಮುಂದಾಗಿದೆ. ಏಷ್ಯಾಕಪ್‌ಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರಲು ಹಿಂದೇಟು ಹಾಕಿದೆ. ಅಲ್ಲದೆ ಏಷ್ಯಾಕಪ್ ಅನ್ನು ನಾವು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಒಪ್ಪಿದ್ದೇವೆ. ಇದೀಗ ಭಾರತದ ಸರದಿ. ನಾವು ಏಕದಿನ ವಿಶ್ವಕಪ್​ನಲ್ಲಿ ಭಾಗವಹಿಸಬೇಕಿದ್ದರೆ, ಪಾಕಿಸ್ತಾನದ ಪಂದ್ಯಗಳನ್ನೂ ಕೂಡ ತಟಸ್ಥ ಸ್ಥಳಗಳಲ್ಲಿ ಆಯೋಜಿಸಬೇಕು ಎಂದು ಪಾಕ್ ಕ್ರೀಡಾ ಸಚಿವ ಎಹ್ಸಾನ್ ಮಝರಿ ತಿಳಿಸಿದ್ದಾರೆ.

ಕಳ್ಳನಿಗೆ ಒಂದು ಪಿಳ್ಳೆ ನೆವ:

ಪಾಕಿಸ್ತಾನದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಬಿಸಿಸಿಐ ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಅನ್ನು ಆಯೋಜಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಒತ್ತಾಯಿಸಿತ್ತು. ಇದೀಗ ಕಳ್ಳನಿಗೆ ಒಂದು ಪಿಳ್ಳೆ ನೆವ ಎಂಬಂತೆ ಇದೇ ಕಾರಣವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಐಸಿಸಿ ಮುಂದಿಡಲಿದೆ.

ಡರ್ಬನ್​ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್, ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಪಾಕ್ ಕ್ರಿಕೆಟ್ ಬೋರ್ಡ್ ಒಪ್ಪಿಕೊಂಡಿರುವುದನ್ನು ಪ್ರಸ್ತಾಪಿಸಲಿದ್ದಾರೆ. ಅಲ್ಲದೆ ಇದೇ ಮಾದರಿಯಲ್ಲಿ ಏಕದಿನ ವಿಶ್ವಕಪ್​ನ ಪಾಕಿಸ್ತಾನದ ಪಂದ್ಯಗಳನ್ನು ನೆರೆ ರಾಷ್ಟ್ರಗಳಲ್ಲಿ ಆಯೋಜಿಸುವಂತೆ ಬಿಸಿಸಿಐ ಮುಂದಾಗಬೇಕೆಂಬ ಬೇಡಿಕೆಯನ್ನು ಪಿಸಿಬಿ ಐಸಿಸಿ ಮುಂದಿಡಲಿದೆ.

ಇದನ್ನೂ ಓದಿ: ODI World Cup 2023: ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ ಐಸಿಸಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ

ಒಟ್ಟಿನಲ್ಲಿ ಏಕದಿನ ವಿಶ್ವಕಪ್​ನಿಂದ ಹಿಂದೆ ಸರಿದರೆ ಆರ್ಥಿಕ ನಷ್ಟಕ್ಕೆ ಗುರಿಯಾಗಲಿದೆ ಎಂದರಿತಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇದೀಗ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜನೆಯ ಡಿಮ್ಯಾಂಡ್ ಮುಂದಿಡಲು ನಿರ್ಧರಿಸಿದೆ. ಈ ಬಗ್ಗೆ ಐಸಿಸಿ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.