ಗೌತಮ್ ಗಂಭೀರ್ ಹೇಳಿಕೆಗೆ ಉಲ್ಟಾ ಹೊಡೆದ ಮೊಹಮ್ಮದ್ ಶಮಿ

Champions Trophy 2025: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಒಂದೇ ಮೈದಾನದಲ್ಲಿ ಪಂದ್ಯವಾಡುತ್ತಿರುವುದರಿಂದ ಹೆಚ್ಚಿನ ಅನುಕೂಲ ಪಡೆದುಕೊಳ್ಳುತ್ತಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದರು. ಈ ಹೇಳಿಕೆಯನ್ನು ಸೌತ್ ಆಫ್ರಿಕಾ ಆಟಗಾರ ರಾಸ್ಸಿ ವಂಡೆರ್ ಡುಸ್ಸುನ್ ಕೂಡ ಸಮರ್ಥಿಸಿದ್ದರು.

ಗೌತಮ್ ಗಂಭೀರ್ ಹೇಳಿಕೆಗೆ ಉಲ್ಟಾ ಹೊಡೆದ ಮೊಹಮ್ಮದ್ ಶಮಿ
Gambhir - Shami

Updated on: Mar 06, 2025 | 11:14 AM

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಒಂದೇ ಮೈದಾನದಲ್ಲಿ ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಇದಕ್ಕೂ ಮುನ್ನ ಭಾರತ ತಂಡ ಕೋಚ್ ಗೌತಮ್ ಗಂಭೀರ್, ದುಬೈನಲ್ಲಿ ಮಾತ್ರ ಆಡುತ್ತಿರುವುದರಿಂದ ನನಗೆ ಯಾವುದೇ ರೀತಿಯ ಲಾಭವಾಗುತ್ತಿಲ್ಲ ಎಂದಿದ್ದರು.

ಟೀಮ್ ಇಂಡಿಯಾ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯವಾಡುತ್ತಿದ್ದರೂ, ನಾವು ಅಭ್ಯಾಸ ನಡೆಸುತ್ತಿರುವುದು ಐಸಿಸಿ ಅಕಾಡೆಮಿ ಗ್ರೌಂಡ್​ನಲ್ಲಿ. ಹೀಗಾಗಿ ಒಂದೇ ಮೈದಾನದಲ್ಲಿ ಆಡುತ್ತಿರುವುದರಿಂದ ತಂಡಕ್ಕೆ ಲಾಭವಾಗುತ್ತಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಗೌತಮ್ ಗಂಭೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೀಗ ಮೊಹಮ್ಮದ್ ಶಮಿ ಅವರ ಹೇಳಿಕೆಯು ಗಂಭೀರ್ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ, ದುಬೈನಲ್ಲಿ ಸತತ ಪಂದ್ಯಗಳನ್ನು ಆಡುವುದರಿಂದ ನಮಗೆ ಪ್ರಯೋಜನವಾಗಿದೆ. ಏಕೆಂದರೆ ಇಲ್ಲಿನ ಪಿಚ್ ಮತ್ತು ಪರಿಸ್ಥಿತಿಗಳ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಸಿಕ್ಕಿದೆ. ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ಆಡುವುದು ಪ್ಲಸ್ ಪಾಯಿಂಟ್ ಎಂದು ಶಮಿ ಹೇಳಿದ್ದಾರೆ.

ಇದನ್ನೂ ಓದಿ
ವಿರಾಟ್ ಕೊಹ್ಲಿಗೆ 100 ಕೋಟಿ ರೂ: ಶುಭ್​ಮನ್ ಗಿಲ್​ಗೆ ಎಷ್ಟು?
VIDEO: ಅಳುತ್ತಿದ್ದ ಅಭಿಮಾನಿಯನ್ನು ಸಮಾಧಾನ ಮಾಡಿದ ಕೆಎಲ್ ರಾಹುಲ್
ನಾನು ಹೊಡೀತಿದ್ದೆ ಅಲ್ವಾ... ವಿರಾಟ್ ಕೊಹ್ಲಿ ಮುಂದೆ ಕೆಎಲ್ ರಾಹುಲ್ ಹತಾಶೆ
Virat Kohli: ಮಾಸ್ಟರ್ ಚೇಸ್ ಮಾಸ್ಟರ್​ನ ವಿಶ್ವ ದಾಖಲೆ

ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿರುವ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ನಾಲ್ಕು ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಈ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿ ಇದೀಗ ಫೈನಲ್​ಗೆ ತಲುಪಿದೆ.

ಅತ್ತ ಉಳಿದ 7 ತಂಡಗಳು ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ತನ್ನ ಪಂದ್ಯಗಳನ್ನಾಡಿತ್ತು. ಹೀಗಾಗಿಯೇ ಒಂದೇ ಮೈದಾನದಲ್ಲಿ ಪಂದ್ಯವಾಡುತ್ತಿರುವುದು ಟೀಮ್ ಇಂಡಿಯಾಗೆ ಪ್ರಯೋಜನಕಾರಿಯಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು.

ಇದಾಗ್ಯೂ ಈ ಅನುಕೂಲಕರ ವಾದವನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಒಪ್ಪಿರಲಿಲ್ಲ. ಆದರೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಒಂದೇ ಮೈದಾನದಲ್ಲಿ ಆಡುತ್ತಿರುವುದರಿಂದ ನಾವು ಪರಿಸ್ಥಿತಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗಿದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದೀಗ ಮೊಹಮ್ಮದ್ ಶಮಿ ಅವರ ಹೇಳಿಕೆಯು ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಮತ್ತೆ ಒಂದೇ ಮೈದಾನದಲ್ಲಿ ಇಡೀ ಟೂರ್ನಿ ಆಡುತ್ತಿರುವ ಭಾರತ ತಂಡಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂಬ ಆರೋಪಕ್ಕೆ ಮಹತ್ವ ಬಂದಂತಾಗಿದೆ.

ಇದನ್ನೂ ಓದಿ: ಶರವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್

ಇನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಶಮಿ, ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 3 ವಿಕೆಟ್ ಉರುಳಿಸಿದ್ದರು. ಈ ಮೂಲಕ ಭಾರತ ತಂಡ ಫೈನಲ್​ಗೆ ತಲುಪುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಉತ್ತಮ ಪ್ರದರ್ಶನದ ಹೊರತಾಗಿಯೂ ಇದೀಗ ಶಮಿ ನೀಡಿರುವ ಹೇಳಿಕೆಯು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

 

 

Published On - 11:13 am, Thu, 6 March 25