ನಾನು ಹೊಡೀತಿದ್ದೆ ಅಲ್ವಾ… ವಿರಾಟ್ ಕೊಹ್ಲಿ ಮುಂದೆ ಕೆಎಲ್ ರಾಹುಲ್ ಹತಾಶೆ
India vs Australia: ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 49.3 ಓವರ್ಗಳಲ್ಲಿ 264 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 48.1 ಓವರ್ಗಳಲ್ಲಿ 267 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಫೈನಲ್ಗೇರಿದೆ.
ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಫೈನಲ್ಗೇರಿದೆ. ಈ ಪಂದ್ಯದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಏಕೆಂದರೆ ಆರಂಭಿಕ ಆಘಾತಕ್ಕೊಳಗಾಗಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತು ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು.
ಅರ್ಧಶತಕದ ಬಳಿಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 98 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಆದರೆ ಶತಕದಂಚಿಗೆ ತಲುಪುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು.
ಹೀಗೆ ಶತಕದಂಚಿನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೈಚೆಲ್ಲುತ್ತಿದ್ದಂತೆ ನಾನ್ ಸ್ಟ್ರೈಕ್ನಲ್ಲಿದ್ದ ಕೆಎಲ್ ರಾಹುಲ್ ಹತಾಶರಾದರು. ಅಲ್ಲದೆ ನಾನು ಹೊಡೀತಿದ್ದೆ ಅಲ್ವಾ… ಯಾಕಾಗಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾಗಿದ್ದೀರಿ ಎಂದು ಕೊಹ್ಲಿಯ ಮುಂದೆ ಹತಾಶಭಾವ ತೋರಿಸಿದ್ದಾರೆ.
ಅಂದರೆ ಇಲ್ಲಿ ರನ್ ಗತಿ ಹೆಚ್ಚಿಸುವ ಜವಾಬ್ದಾರಿ ಹೊತ್ತುಕೊಳ್ಳಲು ಕೆಎಲ್ ರಾಹುಲ್ ಮುಂದಾಗಿದ್ದರು. ಅಲ್ಲದೆ ವಿರಾಟ್ ಕೊಹ್ಲಿಗೆ ಶತಕ ಪೂರೈಸುವಂತೆ ಸೂಚಿಸಿದ್ದರು. ಇದಾಗ್ಯೂ ಬಿಗ್ ಶಾಟ್ಗೆ ಕೈ ಹಾಕಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದರಿಂದ ಕೆಎಲ್ ರಾಹುಲ್ ಹತಾಶಭಾವ ಪ್ರದರ್ಶಿಸಿದರು. ಇದೀಗ ಕೆಎಲ್ ರಾಹುಲ್ ಅವರು ವಿಡಿಯೋ ವೈರಲ್ ಆಗಿದ್ದು, ಕನ್ನಡಿಗನ ದೊಡ್ಡತನಕ್ಕೆ ಕಿಂಗ್ ಕೊಹ್ಲಿ ಅಭಿಮಾನಿಗಳು ಭಾರೀ ಮೆಚ್ಚುಗೆಗಳು ವ್ಯಕ್ತಪಡಿಸುತ್ತಿದ್ದಾರೆ.