Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ 3ನೇ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ (Priyank Panchal) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈಶಾನ್ಯ ವಲಯದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಪಶ್ಚಿಮ ವಲಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಈಶಾನ್ಯ ವಲಯ ತಂಡವು ಪಶ್ಚಿಮ ವಲಯದ ಅನುಭವಿ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದರು. ಇದಾಗ್ಯೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಶನ್ಗಮ್ 30 ರನ್ಗಳನ್ನು ಕಲೆಹಾಕಿದರು.
ಇನ್ನು 9ನೇ ಕ್ರಮಾಂಕದಲ್ಲಿ ಇಮ್ಲಿವಾಟಿ ಲೆಮಟೂರು 38 ಎಸೆತಗಳಲ್ಲಿ 5 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 38 ರನ್ ಬಾರಿಸಿದ್ದು ತಂಡದ ಪರ ಮೂಡಿಬಂದ ಗರಿಷ್ಠ ಸ್ಕೋರ್. ಇಮ್ಲಿವಾಟಿಯ ಈ ಅಮೂಲ್ಯ ಕೊಡಗೆಯೊಂದಿಗೆ ಈಶಾನ್ಯ ವಲಯ ತಂಡವು 47 ಓವರ್ಗಳಲ್ಲಿ 207 ರನ್ಗಳಿಸಿ ಆಲೌಟ್ ಆಯಿತು.
ಪಶ್ಚಿಮ ವಲಯ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅರ್ಝಾನ್ ನಾಗ್ವಾಸ್ವಾಲ್ಲಾ 31 ರನ್ ನೀಡಿ 3 ವಿಕೆಟ್ ಪಡೆದರೆ, ಶಮ್ಸ್ ಮುಲಾನಿ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಕಬಳಿಸಿದರು.
208 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಶ್ಚಿಮ ವಲಯ ತಂಡದ ಪರ ಆರಂಭಿಕರಾದ ಪ್ರಿಯಾಂಕ್ ಪಾಂಚಾಲ್ ಹಾಗೂ ಹಾರ್ವಿಕ್ ದೇಸಾಯಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ ಕೇವಲ 21 ಓವರ್ಗಳಲ್ಲಿ 167 ರನ್ ಪೇರಿಸಿದ ಈ ಜೋಡಿ ತಂಡದ ಗೆಲುವನ್ನು ಖಚಿತಪಡಿಸಿದ್ದರು.
ಈ ಹಂತದಲ್ಲಿ 71 ಎಸೆತಗಳಲ್ಲಿ 14 ಫೋರ್ಗಳೊಂದಿಗೆ 85 ರನ್ ಬಾರಿಸಿದ್ದ ಹಾರ್ವಿಕ್ ದೇಸಾಯಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಪ್ರಿಯಾಂಕ್ ಪಾಂಚಾಲ್ ಈಶಾನ್ಯ ಬೌಲರ್ಗಳ ಬೆಂಡೆತ್ತಿದರು.
ಕೇವಲ 69 ಎಸೆತಗಳನ್ನು ಎದುರಿಸಿದ ಪ್ರಿಯಾಂಕ್ ಪಾಂಚಾಲ್ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳನ್ನು ಬಾರಿಸಿದರು. ಈ ಮೂಲಕ ಅಜೇಯ 99 ರನ್ ಬಾರಿಸಿ 25.1 ಓವರ್ಗಳಲ್ಲಿ ತಂಡವನ್ನು 208 ರನ್ಗಳ ಗುರಿ ಮುಟ್ಟಿಸಿದರು. ಈ ಮೂಲಕ ತನ್ನ ಮೊದಲ ಪಂದ್ಯದಲ್ಲೇ ಪಶ್ಚಿಮ ವಲಯ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಪಶ್ಚಿಮ ವಲಯ ಪ್ಲೇಯಿಂಗ್ 11: ಪ್ರಿಯಾಂಕ್ ಪಾಂಚಾಲ್ (ನಾಯಕ) , ರಾಹುಲ್ ತ್ರಿಪಾಠಿ , ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಅಂಕಿತ್ ಬಾವ್ನೆ , ಶಿವಂ ದುಬೆ , ಸರ್ಫರಾಝ್ ಖಾನ್ , ಶಮ್ಸ್ ಮುಲಾನಿ , ಪಾರ್ಥ್ ಭುತ್ , ಅರ್ಝಾನ್ ನಾಗವಾಸ್ವಾಲ್ಲಾ , ಅತಿತ್ ಶೇತ್ , ಚಿಂತನ್ ಗಜ.
ಇದನ್ನೂ ಓದಿ: Priyank Panchal: ರೋಹಿತ್ ಶರ್ಮಾ ಸ್ಥಾನಕ್ಕೆ ಆಯ್ಕೆಯಾದ ಪ್ರಿಯಾಂಕ್ ಪಾಂಚಾಲ್ ಯಾರು?
ಈಶಾನ್ಯ ವಲಯ ಪ್ಲೇಯಿಂಗ್ 11: ಅನುಪ್ ಅಹ್ಲಾವತ್ , ನಿಲೇಶ್ ಲಾಮಿಚಾನೆ , ಜೆಹು ಆಂಡರ್ಸನ್ , ಲ್ಯಾಂಗ್ಲೋನ್ಯಾಂಬಾ ಕಿಶನ್ಗಮ್ (ನಾಯಕ) , ಕಮ್ಶಾ ಯಾಂಗ್ಫೊ (ವಿಕೆಟ್ ಕೀಪರ್) , ರೆಕ್ಸ್ ರಾಜ್ಕುಮಾರ್ , ಪಾಲ್ಜೋರ್ ತಮಾಂಗ್ , ಲ್ಯಾರಿ ಸಂಗ್ಮಾ , ಇಮ್ಲಿವಾಟಿ ಲೆಮ್ತೂರ್ , ಲೀ ಯೋಂಗ್ ಲೆಪ್ಚಾ , ಕ್ರೈವಿಟ್ಸೊ ಕೆನ್ಸ್.