ವಾರ್ನರ್‌ಗೆ ನಾನು ಮಾತು ಕೊಟ್ಟಿದ್ದೆ, ಆಸ್ಟ್ರೇಲಿಯಾದ ಕಳ್ಳಾಟ ಬಿಚ್ಚಿಡ್ತೀನಿ!

ವಿಶ್ವ ಕ್ರಿಕೆಟ್‌ ಅನ್ನೇ ತಲ್ಲಣಗೊಳಿಸಿದ್ದ 2018ರ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಕಠಿಣ ಶಿಕ್ಷೆಗೆ ಗುರಿಯಾಗಿದ್ದ ಆ ಮೂವರು ಸ್ಟಾರ್ ಆಟಗಾರರೆಂದರೆ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೆವಿಡ್ ವಾರ್ನರ್ ಮತ್ತು ಯುವ ಬ್ಯಾಟರ್ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್. ಸೌತ್ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ಸ್ಯಾಂಡ್‌ಪೇಪರ್ ಬಳಸಿ ಚೆಂಡಿನ ಆಕಾರವನ್ನು ವಿರೂಪಗೊಳಿಸಲು ಯತ್ನಿಸಿದ  ವಂಚನೆಗಾಗಿ ಮಾರ್ಚ್ 2018 ರಲ್ಲಿ ಈ ಮೂವರ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಲಾಗಿತ್ತು.

ವಾರ್ನರ್‌ಗೆ ನಾನು ಮಾತು ಕೊಟ್ಟಿದ್ದೆ, ಆಸ್ಟ್ರೇಲಿಯಾದ ಕಳ್ಳಾಟ ಬಿಚ್ಚಿಡ್ತೀನಿ!
Usman - Warner
Image Credit source: GettyImages

Updated on: Nov 09, 2026 | 9:30 AM

“ಅದು ಕೇವಲ ಮೂವರಲ್ಲ, ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ನಾವೆಲ್ಲರೂ ಆ ಪಾಪದಲ್ಲಿ ಭಾಗಿಯಾಗಿದ್ದೆವು!” – ಇದು 2018ರ ಸ್ಯಾಂಡ್‌ಪೇಪರ್ ಗೇಟ್ ಹಗರಣದ ಬಗ್ಗೆ ಆಸ್ಟ್ರೇಲಿಯಾದ ಹಿರಿಯ ಆಟಗಾರ ಉಸ್ಮಾನ್ ಖ್ವಾಜಾ ಸಿಡಿಸಿರುವ ಹೊಸ ಬಾಂಬ್. ತಮ್ಮ ಮುಂಬರುವ ಆತ್ಮಚರಿತ್ರೆ ‘ ಸಬ್ರ್ ’ ಬಿಡುಗಡೆಗೂ ಮುನ್ನ ಖ್ವಾಜಾ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ವಿಡಿಯೋ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ತಮ್ಮ ಬಾಲ್ಯದ ಗೆಳೆಯ ಡೆವಿಡ್ ವಾರ್ನರ್ ಅವರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಇಡೀ ಆಸ್ಟ್ರೇಲಿಯಾ ಕ್ರಿಕೆಟ್ ವ್ಯವಸ್ಥೆಯ ಮುಖವಾಡವನ್ನು ಖ್ವಾಜಾ ಕಳಚಿಟ್ಟಿದ್ದಾರೆ. ಅಂದು ನಡೆದಿದ್ದೇನು? ಕ್ರಿಕೆಟ್ ಆಸ್ಟ್ರೇಲಿಯಾ ಮುಚ್ಚಿಟ್ಟಿದ್ದ ಸತ್ಯಗಳೇನು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

“ಡೆವಿಡ್ ವಾರ್ನರ್‌ಗೆ ನಾನು ಮಾತು ಕೊಟ್ಟಿದ್ದೆ”

ಉಸ್ಮಾನ್ ಖ್ವಾಜಾ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಈ ರಹಸ್ಯಗಳನ್ನು ಹೊರಹಾಕಲು ಮುಖ್ಯ ಕಾರಣವೇನೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ಬಾಲ್ಯದ ಗೆಳೆಯ ಹಾಗೂ ದೀರ್ಘಕಾಲದ ಆರಂಭಿಕ ಜೊತೆಗಾರ ಡೆವಿಡ್ ವಾರ್ನರ್ ಅವರ ಹೆಸರನ್ನು ಪ್ರಸ್ತಾಪಿಸಿರುವ ಖ್ವಾಜಾ, “ನಾನು ಸತ್ಯವನ್ನೇ ಜಗತ್ತಿಗೆ ಹೇಳುತ್ತೇನೆ ಎಂದು ವಾರ್ನರ್‌ಗೆ ಮಾತು ಕೊಟ್ಟಿದ್ದೆ. ಈ ಕಥೆಯ ಸಂಪೂರ್ಣ ನಿಜವಾದ ಚಿತ್ರಣ ಹೊರಬರಬೇಕಿತ್ತು. ಅಂದು ನನ್ನ ಗೆಳೆಯ ವಾರ್ನರ್, ಸ್ಮಿತ್ ಹಾಗೂ ಬ್ಯಾನ್​ಕ್ರಾಫ್ಟ್ ಮಾತ್ರ ಬಲಿಪಶುವಾಗಿದ್ದರು. ಆಗಲೇ ನಾನು ಡೇವಿಡ್ ವಾರ್ನರ್​​ಗೆ ಈ ಸತ್ಯವನ್ನು ಒಂದಿನ ಬಯಲಿಗೆಳೆಯುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ಇದೀಗ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದೇನೆ” ಎಂದು ಉಸ್ಮಾನ್ ಖ್ವಾಜಾ ತಿಳಿಸಿದ್ದಾರೆ.

Loading...

ಅಧಿಕೃತ ತನಿಖೆಯ ನೆಪದಲ್ಲಿ ಇಡೀ ತಂಡದ ವ್ಯವಸ್ಥೆಯನ್ನು ಹಾಗೂ ಉಳಿದ ಆಟಗಾರರನ್ನು ರಕ್ಷಿಸಲು ಸ್ಟೀವ್ ಸ್ಮಿತ್, ಡೆವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಅವರನ್ನು ಮಾತ್ರ ಬಲಿಪಶು ಮಾಡಲಾಯಿತು. ಇಡೀ ಜಗತ್ತಿನ ಎದುರು ಈ ಮೂವರಷ್ಟೇ ಅಪರಾಧಿಗಳಂತೆ ತಲೆ ತಗ್ಗಿಸುವಂತೆ ಮಾಡಲಾಯಿತು ಎಂದು ಉಸ್ಮಾನ್ ಖ್ವಾಜಾ ತೀವ್ರ ಬೇಸರ ಹೊರಹಾಕಿದ್ದಾರೆ.

ನಾವೆಲ್ಲರೂ ಭಾಗಿಯಾಗಿದ್ದೆವು!

ಕ್ರಿಕೆಟ್ ಆಸ್ಟ್ರೇಲಿಯಾ (CA) ನಡೆಸಿರುವ ಅಧಿಕೃತ ತನಿಖೆಯಲ್ಲಿ ಕೇವಲ ಸ್ಮಿತ್, ವಾರ್ನರ್ ಮತ್ತು ಬ್ಯಾನ್‌ಕ್ರಾಫ್ಟ್‌ಗೆ ಮಾತ್ರ ಈ ಸಂಚಿನ ಅರಿವಿತ್ತು ಎಂದು ಹೇಳಲಾಗಿತ್ತು. ಆದರೆ ಈ ಅಧಿಕೃತ ವರದಿಯನ್ನು ಉಸ್ಮಾನ್ ಖ್ವಾಜಾ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

“ಅದು ಕೇವಲ ಬ್ಯಾಟರ್‌ಗಳಲ್ಲ, ಕೇವಲ ಬೌಲರ್‌ಗಳಲ್ಲ ಅಥವಾ ಪೋಷಕ ಸಿಬ್ಬಂದಿಯಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ನಾವೆಲ್ಲರೂ ಸೇರಿ ಆ ನಿರ್ಧಾರಕ್ಕೆ ಬಂದಿದ್ದೆವು. ಇಡೀ ತಂಡಕ್ಕೆ ಆ ಕಳ್ಳಾಟದ ಬಗ್ಗೆ ಗೊತ್ತಿತ್ತು ” ಎಂದು ಖ್ವಾಜಾ ಹೇಳಿದ್ದಾರೆ.

ಬ್ಯಾನ್‌ಕ್ರಾಫ್ಟ್, ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳುವುದಕ್ಕಿಂತ ಮುಂಚಿತವಾಗಿ, ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿತ್ತು ಎಂಬ ಮತ್ತೊಂದು ಆಘಾತಕಾರಿ ಸತ್ಯವನ್ನು ಕೂಡ ಖ್ವಾಜಾ ಬಯಲು ಮಾಡಿದ್ದಾರೆ.

ಸೌತ್ ಆಫ್ರಿಕಾ ತಂಡದ ಮೇಲಿದ್ದ ಪೈಪೋಟಿ!

ಆಸ್ಟ್ರೇಲಿಯಾ ತಂಡವು ಇದ್ದಕ್ಕಿದ್ದಂತೆ ಸ್ಯಾಂಡ್‌ಪೇಪರ್ ಬಳಸುವಂತಹ ಕೀಳು ಮಟ್ಟದ ನಿರ್ಧಾರಕ್ಕೆ ಬರಲು ಕಾರಣವೇನೆಂಬುದನ್ನೂ ಉಸ್ಮಾನ್ ಖ್ವಾಜಾ ಬಹಿರಂಗಪಡಿಸಿದ್ದಾರೆ. ಅಂದಿನ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವು ಚೆಂಡನ್ನು ಅದ್ಭುತವಾಗಿ ರಿವರ್ಸ್ ಸ್ವಿಂಗ್ ಮಾಡುತ್ತಿತ್ತು. ಅವರ ವೇಗ ಮತ್ತು ರಹಸ್ಯ ತಂತ್ರಗಳಿಗೆ ಪೈಪೋಟಿ ನೀಡಲು ಹಾಗೂ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಆಸ್ಟ್ರೇಲಿಯಾ ತಂಡವು ಈ ಅಡ್ಡದಾರಿ ಹಿಡಿದಿತ್ತು ಎಂದು ಅವರು ತಿಳಿಸಿದ್ದಾರೆ.

ಇಬ್ಬರು ಆಟಗಾರರ ‘ಅಸಲಿ ಬಣ್ಣ’ ಬಯಲು!

ಕೇಪ್‌ಟೌನ್ ವಿವಾದದ ಬಳಿಕ, ಇಡೀ ತಂಡವೇ ಒಟ್ಟಾಗಿ ಈ ಹಗರಣದ ಜವಾಬ್ದಾರಿಯನ್ನು ಹೊರಬೇಕು ಎಂದು ಉಸ್ಮಾನ್ ಖ್ವಾಜಾ ಡ್ರೆಸ್ಸಿಂಗ್ ರೂಮ್‌ನಲ್ಲಿ ವಾದಿಸಿದ್ದರು. ಆದರೆ ತಂಡದ ಮ್ಯಾನೇಜರ್ ಗೇವಿನ್ ಡೋವಿ ನಂತರ ಖ್ವಾಜಾಗೆ ತಿಳಿಸಿದಂತೆ, ತಂಡದ ಇಬ್ಬರು ಪ್ರಮುಖ ಆಟಗಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಆ ಇಬ್ಬರು ಯಾರೆಂದು ತಮಗೆ ಗೊತ್ತು ಎಂದಿರುವ ಉಸ್ಮಾನ್ ಖ್ವಾಜಾ, “ಸಂಕಷ್ಟದ ಸಮಯದಲ್ಲಿ ಅವರು ಕೇವಲ ತಮ್ಮ ಸ್ವಾರ್ಥವನ್ನು ನೋಡಿಕೊಂಡರು, ಅವರ ಅಸಲಿ ಬಣ್ಣ ನನಗೆ ಆಗ ತಿಳಿಯಿತು” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಖ್ವಾಜಾ ಧ್ವನಿಯನ್ನು ಅಡಗಿಸಿದ್ದು ಯಾರು?

ಉಸ್ಮಾನ್ ಖ್ವಾಜಾ ಅವರು ಈ ಸತ್ಯವನ್ನು 2018ರಲ್ಲೇ ಮತ್ತು ನಂತರ 2021ರಲ್ಲೂ ಬಹಿರಂಗಪಡಿಸಲು ಯತ್ನಿಸಿದ್ದರು. ಆದರೆ ಎರಡು ಬಾರಿ ಅವರು ಮೌನಕ್ಕೆ ಶರಣಾಗಬೇಕಾಯಿತು.

  •  ಮೊದಲ ಬಾರಿ ಅವರು ಧ್ವನಿ ಎತ್ತಲು ಹೋದಾಗ ಅಂದಿನ ನಾಯಕ ಸ್ಟೀವ್ ಸ್ಮಿತ್ ಅದನ್ನು ತಡೆದಿದ್ದರು.
  • 2021 ರಲ್ಲಿ, ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್… ಜಂಟಿ ಹೇಳಿಕೆ ಬಿಡುಗಡೆ ಮಾಡಿ ತಮಗೆ ಏನೂ ತಿಳಿದಿಲ್ಲ ಎಂದಾಗ ಉಸ್ಮಾನ್ ಖ್ವಾಜಾ ಒಂಟಿಯಾಗಬೇಕಾಯಿತು.

ಆಘಾತಕಾರಿ ವಿಷಯವೆಂದರೆ, 2018 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ತನಿಖೆ ನಡೆಸಿದಾಗ, ಡ್ರೆಸ್ಸಿಂಗ್ ರೂಮ್‌ನಲ್ಲಿ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದ ಉಸ್ಮಾನ್ ಖ್ವಾಜಾ ಅವರನ್ನೇ ತನಿಖಾಧಿಕಾರಿಗಳು ಒಮ್ಮೆಯೂ ಸಂದರ್ಶನ ಮಾಡಿರಲಿಲ್ಲ! ತಾವು ಸತ್ಯವನ್ನೇ ಹೇಳಿ ಇಡೀ ತಂಡವನ್ನು ಹೊಣೆಗಾರರನ್ನಾಗಿ ಮಾಡಲು ಸಿದ್ಧರಾಗಿದ್ದರಿಂದಲೇ ತಮ್ಮನ್ನು ಬೇಕೆಂದೇ ತನಿಖೆಯಿಂದ ದೂರ ಇಡಲಾಗಿತ್ತು ಎಂದು ಉಸ್ಮಾನ್ ಖ್ವಾಜಾ ಶಂಕಿಸಿದ್ದಾರೆ.

“ನಾವು ಯಾರನ್ನೂ ಬಲಿಪಶು ಮಾಡುತ್ತಿಲ್ಲ”

ತಮ್ಮ ಪುಸ್ತಕದ ಪ್ರಚಾರಕ್ಕಾಗಿ ಮತ್ತು ಸಹ ಆಟಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಉಸ್ಮಾನ್ ಖ್ವಾಜಾ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಟೀಕಿಸಿದ್ದವು. ಇದಕ್ಕೆ ತಿರುಗೇಟು ನೀಡಿರುವ ಖ್ವಾಜಾ, “ನಾನು ಯಾರನ್ನೂ ಬಲಿಪಶು ಮಾಡುತ್ತಿಲ್ಲ. ಸದ್ಯ ತಂಡದಲ್ಲಿರುವವರು ಅಥವಾ ಅಂದು ಪ್ರವಾಸದಲ್ಲಿದ್ದ ನಾವು ಯಾರೂ ಸಂತ್ರಸ್ತರಲ್ಲ. ನಿಜವಾದ ಬಲಿಪಶುಗಳು ಆ ಮೂವರು (ಸ್ಮಿತ್, ವಾರ್ನರ್, ಬ್ಯಾನ್‌ಕ್ರಾಫ್ಟ್) ಮಾತ್ರ. ಅವರು ಇಡೀ ಜಗತ್ತಿನ ಎದುರು ಚೀಟರ್ಸ್ ಎಂದು ಅವಮಾನ ಅನುಭವಿಸಿದರು” ಎಂದು ಬೇಸರ ಹೊರಹಾಕಿದ್ದಾರೆ.

ಪರ-ವಿರೋಧ:

ಮಾಜಿ ಕೋಚ್ ಲೆಹ್ಮನ್ ನಿರಾಕರಣೆ: ಅಂದಿನ ಹೆಡ್ ಕೋಚ್ ಡ್ಯಾರೆನ್ ಲೆಹ್ಮನ್ ಈ ಆರೋಪಗಳನ್ನು ತಳ್ಳಿಹಾಕಿದ್ದು, “ತಂಡದಲ್ಲಿದ್ದ ಪ್ರತಿಯೊಬ್ಬರಿಗೂ ಇದರ ಅರಿವಿತ್ತು ಎಂದು ನನಗನಿಸುವುದಿಲ್ಲ” ಎಂದಿದ್ದಾರೆ.

ಚಾಡ್ ಸೇಯರ್ಸ್ ಬೆಂಬಲ: ಅಂದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದ ಮಾಜಿ ಆಸೀಸ್ ವೇಗಿ ಚಾಡ್ ಸೇಯರ್ಸ್ ಉಸ್ಮಾನ್ ಖ್ವಾಜಾ ಅವರ ಬೆಂಬಲಕ್ಕೆ ನಿಂತಿದ್ದು, “ಖ್ವಾಜಾ ಹೇಳಿರುವುದೆಲ್ಲವೂ ಅಕ್ಷರಶಃ ಸತ್ಯ. ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಅದರ ಮಾಹಿತಿ ಇತ್ತು” ಎಂದು ಸಾಕ್ಷಿ ನುಡಿದಿದ್ದಾರೆ.

ನಿರಾಕರಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಷ್ಟೆಲ್ಲಾ ಹೊಸ ಆಯಾಮಗಳು ಹೊರಬಂದರೂ ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು, “ನಾವು ಅಂದು ನಡೆಸಿದ ತನಿಖೆ ಮತ್ತು ವಿಧಿಸಿದ ಶಿಕ್ಷೆಗಳ ನಿರ್ಧಾರಕ್ಕೆ ಈಗಲೂ ಬದ್ಧವಾಗಿದ್ದೇವೆ, ಹೊಸದಾಗಿ ಯಾವುದೇ ತನಿಖೆ ನಡೆಸುವುದಿಲ್ಲ” ಎಂದು ಜಾರಿಕೊಂಡಿದೆ.

ಇದನ್ನೂ ಓದಿ: ಅದೇ ರಾಗ, ಅದೇ ಹಾಡು… ಪಾಕ್ ತಂಡದ್ದು ಅದೇ ಪಾಡು!

ಒಟ್ಟಾರೆಯಾಗಿ, ಉಸ್ಮಾನ್ ಖವಾಜಾ ಅವರ ಈ ಹೊಸ ಬಹಿರಂಗಪಡಿಸುವಿಕೆಯು ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ ಮೂಡಿಸಿರುವುದಂತೂ ನಿಜ. ಅಂದು ಕೇವಲ ಮೂವರು ಆಟಗಾರರು ಅನುಭವಿಸಿದ ಸಾರ್ವಜನಿಕ ಅವಮಾನ ಮತ್ತು ನಿಷೇಧದ ಹಿಂದಿದ್ದ ಕರಾಳ ವ್ಯವಸ್ಥೆಯನ್ನು ಇದು ಜಗತ್ತಿನ ಎದುರು ತಂದಿಟ್ಟಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಷಯವನ್ನು ಇಲ್ಲಿಗೇ ಮುಚ್ಚಿಹಾಕಲು ಯತ್ನಿಸುತ್ತಿದ್ದರೂ, ಆಸೀಸ್ ಡ್ರೆಸ್ಸಿಂಗ್ ರೂಮ್‌ನ ಒಳಜಗಳ ಮತ್ತು ಕೆಲವು ಆಟಗಾರರ ‘ಅಸಲಿ ಬಣ್ಣ’ ಮಾತ್ರ ಈಗ ಇಡೀ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗೆಳೆಯ ಡೇವಿಡ್ ವಾರ್ನರ್​​ಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಖವಾಜಾ ಧ್ವನಿ ಎತ್ತಿರುವುದು, ಕ್ರಿಕೆಟ್ ಇತಿಹಾಸದ ಈ ಕಪ್ಪು ಚುಕ್ಕೆಯನ್ನು ಸಂಪೂರ್ಣ ಹೊಸ ಆಯಾಮದಲ್ಲಿ ನೋಡುವಂತೆ ಮಾಡಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us