ಪಾಕ್ ಸೂಪರ್ ಲೀಗ್​ನಲ್ಲಿ ಶತಕ ಸಿಡಿಸಿದ ಆಟಗಾರನಿಗೆ ಹೇರ್ ಡ್ರೈಯರ್ ಗಿಫ್ಟ್; ವಿಡಿಯೋ ನೋಡಿ

Pakistan Super League 2025: 2025ರ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಕರಾಚಿ ಕಿಂಗ್ಸ್ ತಂಡದ ಪರ ಶತಕ ಸಿಡಿಸಿದ ಆಟಗಾರನಿಗೆ ಹೇರ್ ಡ್ರೈಯರ್ ನೀಡಿದ ವಿಡಿಯೋ ವೈರಲ್ ಆಗಿದೆ. ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಜೇಮ್ಸ್ ವಿನ್ಸ್ ಗೆಲುವಿನ ಶತಕ ಸಿಡಿಸಿದರು. ಅವರಿಗೆ ತಂಡದ ವತಿಯಿಂದ ಹೇರ್ ಡ್ರೈಯರ್ ಗಿಫ್ಟ್ ನೀಡಲಾಗಿದೆ.

ಪಾಕ್ ಸೂಪರ್ ಲೀಗ್​ನಲ್ಲಿ ಶತಕ ಸಿಡಿಸಿದ ಆಟಗಾರನಿಗೆ ಹೇರ್ ಡ್ರೈಯರ್ ಗಿಫ್ಟ್; ವಿಡಿಯೋ ನೋಡಿ
ಪಾಕಿಸ್ತಾನ ಸೂಪರ್ ಲೀಗ್

Updated on: Apr 13, 2025 | 9:39 PM

ಐಪಿಎಲ್​ಗೆ (IPL) ಟಕ್ಕರ್ ಕೊಡಲೆಂದೇ ಇದೇ ಮೊದಲ ಬಾರಿಗೆ ಐಪಿಎಲ್ ನಡೆಯುತ್ತಿರುವ ಸಮಯದಲ್ಲೇ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL)​ ಅನ್ನು ನಡೆಸಲಾಗುತ್ತಿದೆ. ಆದರೆ ಈ ಲೀಗ್​ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಏಪ್ರಿಲ್ 11 ರಂದು ಆರಂಭವಾದ 10ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್​ಗೆ ಪ್ರೇಕ್ಷಕರ ಕೊರತೆಯುಂಟಾಗಿದೆ. ಈ ಲೀಗ್​ನಲ್ಲಿ ಕೆಲವು ಸ್ಟಾರ್ ಕ್ರಿಕೆಟಿಗರು ಆಡುತ್ತಿದ್ದರೂ ವೀಕ್ಷಕರು ಕ್ರೀಡಾಂಗಣಕ್ಕೆ ಬರುತ್ತಿಲ್ಲ. ಹೀಗಾಗಿ ನಷ್ಟದಲ್ಲೇ ನಡೆಯುತ್ತಿರುವ ಈ ಲೀಗ್‌ನ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬ ನೆಟ್ಟಿಗರು ಪಾಕಿಸ್ತಾನ ಸೂಪರ್ ಲೀಗ್ ಅನ್ನು ಗೇಲಿ ಮಾಡಲಾರಂಭಿಸಿದ್ದಾರೆ.

2025 ರ ಪಾಕಿಸ್ತಾನ ಸೂಪರ್ ಲೀಗ್​ನ ಮೂರನೇ ಪಂದ್ಯವು ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಮುಲ್ತಾನ್ ಸುಲ್ತಾನ್ಸ್ ತಂಡದ ಮೊಹಮ್ಮದ್ ರಿಜ್ವಾನ್ 63 ಎಸೆತಗಳಲ್ಲಿ ಔಟಾಗದೆ 105 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಮುಲ್ತಾನ್ ಸುಲ್ತಾನ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 234 ರನ್‌ಗಳ ದೊಡ್ಡ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು.

PSL 2025: ಪ್ರೇಕ್ಷಕರಿಗಿಂತ ಭದ್ರತಾ ಸಿಬ್ಬಂದಿಗಳೇ ಹೆಚ್ಚು; ಖಾಲಿ ಹೊಡೆಯುತ್ತಿದೆ ಪಾಕ್ ಸೂಪರ್​ ಲೀಗ್

ಜೇಮ್ಸ್ ವಿನ್ಸ್ ಭರ್ಜರಿ ಶತಕ

ಈ ಗುರಿ ಬೆನ್ನಟ್ಟಿದ ಕರಾಚಿ ಕಿಂಗ್ಸ್ ತಂಡ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರ ಜೇಮ್ಸ್ ವಿನ್ಸ್ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಜೇಮ್ಸ್ ವಿನ್ಸ್ 43 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 101 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಅದ್ಭುತ ಇನ್ನಿಂಗ್ಸ್‌ಗಾಗಿ ವಿನ್ಸ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದಾದ ನಂತರ ತಂಡದ ಗೆಲುವಿಗೆ ಕಾರಣರಾದ ವಿನ್ಸ್​ರನ್ನು ಕರಾಚಿ ಕಿಂಗ್ಸ್ ಡ್ರೆಸ್ಸಿಂಗ್ ರೂಮ್​ನಲ್ಲಿ ಸನ್ಮಾನಿಸಲಾಯಿತು. ಅಚ್ಚರಿಯ ವಿಷಯವೆಂದರೆ ಈ ಗೌರವಾರ್ಥವಾಗಿ ಅವರಿಗೆ ಹೇರ್ ಡ್ರೈಯರ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಅದರ ವೀಡಿಯೊವನ್ನು ಕರಾಚಿ ಕಿಂಗ್ಸ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ.

ಗೇಲಿ ಮಾಡಿದ ನೆಟ್ಟಿಗರು

ಕರಾಚಿ ಕಿಂಗ್ಸ್‌ನ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪಾಕಿಸ್ತಾನ ಸೂಪರ್ ಲೀಗ್‌ ಅನ್ನು ಗೇಲಿ ಮಾಡಲಾರಂಭಿಸಿದ್ದಾರೆ. ಗಲ್ಲಿ ಕ್ರಿಕೆಟ್​ನಲ್ಲಿ ಜಯ ಸಾಧಿಸುವ ತಂಡಕ್ಕೆ ಇದಕ್ಕಿಂತಲೂ ಉತ್ತಮವಾದ ಉಡುಗೊರೆಯನ್ನು ನೀಡಲಾಗುತ್ತದೆ ಎಂದು ಹೇಳುವ ಮೂಲಕ ನೆಟ್ಟಿಗರು ಪಾಕ್ ಸೂಪರ್ ಲೀಗ್ ಅನ್ನು ಅಪಹಾಸ್ಯ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ