ವಿರಾಟ್ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ಕೆರಳಿ ಕೆಂಡವಾದ ಬಾಬರ್ ಆಝಂ

Babar Azam Virat Kohli comparison: ಕೆಲವೇ ವರ್ಷಗಳ ಹಿಂದೆ ವಿರಾಟ್ ಕೊಹ್ಲಿಗೆ ಹೋಲಿಕೆಯಾಗುತ್ತಿದ್ದ ಬಾಬರ್ ಆಝಂ, ಇತ್ತೀಚಿನ ಕಳಪೆ ಪ್ರದರ್ಶನದಿಂದ ಹೊರಗಿಡಲ್ಪಟ್ಟಿದ್ದಾರೆ. ಪಿಎಸ್ಎಲ್ ಪಂದ್ಯದಲ್ಲಿ ವಿಫಲವಾದಾಗ, ಪತ್ರಕರ್ತರು ಅವರನ್ನು ಕೊಹ್ಲಿಗೆ ಹೋಲಿಸಿ ಪ್ರಶ್ನಿಸಿದರು. ಇದಕ್ಕೆ ಕೆಂಡಮಂಡಲರಾದ ಬಾಬರ್, ಹೋಲಿಕೆ ನಿಲ್ಲಿಸಿ, ಪಂದ್ಯ ಮುಗಿಸುವ ಸಾಮರ್ಥ್ಯ ನನಗಿದೆ ಎಂದು ಖಡಕ್ ಉತ್ತರ ನೀಡಿದರು. ಈ ಘಟನೆ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ಕೆರಳಿ ಕೆಂಡವಾದ ಬಾಬರ್ ಆಝಂ
Babar, Virat

Updated on: Apr 09, 2026 | 4:33 PM

ಕೆಲವೇ ಕೆಲವು ವರ್ಷಗಳ ಹಿಂದೆ, ಪ್ರಸ್ತುತ ವಿಶ್ವ ಕ್ರಿಕೆಟ್​ನ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಬಾಬರ್ ಆಝಂ (Babar Azam) ಅವರ ಹೆಸರನ್ನು ಸಹ ಹೇಳಲಾಗುತಿತ್ತು. ವಿರಾಟ್ ಕೊಹ್ಲಿ ಎರಡು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕವೂ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಬಾಬರ್ ಆಝಂ ಹಾಗಲ್ಲ. ಸತತ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಬಾಬರ್​ ಈಗಲೂ ಎಲ್ಲಾ ಮಾದರಿಯಲ್ಲಿ ಆಡುತ್ತಿದ್ದಾರೆ. ಆದರೆ ಅವಮಾನವೆಂಬಂತೆ ಪಾಕ್ ಆಯ್ಕೆ ಮಂಡಳಿ ಅವರನ್ನು ತಂಡಕ್ಕೆ ಆಯ್ಕೆ ಮಾಡದೆ ಹೊರಗಿಡುತ್ತಿದೆ. ಹೀಗಿರುವಾಗ ಪಾಕ್ ಪತ್ರಕರ್ತರೊಬ್ಬರು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿ ಬಾಬರ್ ಆಝಂ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ ಇದಕ್ಕೆ ಕೆರಳಿ ಕೆಂಡವಾಗಿರುವ ಬಾಬರ್ ಆಝಂ ನೀಡಿದ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಬರ್ ತಂಡಕ್ಕೆ ಜಯ

ವಾಸ್ತವವಾಗಿ ಭಾರತದಲ್ಲಿ ಐಪಿಎಲ್ ನಡೆಯುತ್ತಿರುವಂತೆ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಲೀಗ್​ನಲ್ಲಿ ಬಾಬರ್ ಆಝಂ ಪೇಶಾವರ್ ಝಲ್ಮಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಬುಧವಾರ ಪೇಶಾವರ್ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೇವಲ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪೇಶಾವರ್ ತಂಡವು ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆದ್ದಿತು. ತಂಡದ ಪರ ಬಾಬರ್ ಆಝಂ ನಾಯಕನ ಇನ್ನಿಂಗ್ಸ್ ಆಡಿದರಾದರೂ ಪಂದ್ಯವನ್ನು ಮುಗಿಸುವ ಮೊದಲೇ ವಿಕೆಟ್ ಒಪ್ಪಿಸಿದರು. ಪಂದ್ಯದ ನಂತರ ಬಾಬರ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಯಿತು.

ಪಂದ್ಯ ಮುಗಿಸಲು ಬಾಬರ್ ವಿಫಲ

ಪೇಶಾವರ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಬಾಬರ್ 37 ಎಸೆತಗಳಲ್ಲಿ 43 ರನ್ ಬಾರಿಸಿದರು. ಅವರ ಇನ್ನಿಂಗ್ಸ್​ನಲ್ಲಿ ಒಂದೇ ಒಂದು ಸಿಕ್ಸ್ ಇರದಿದ್ದರೂ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ತಂಡವು ಕೇವಲ 145 ರನ್‌ಗಳನ್ನು ಬೆನ್ನಟ್ಟುತ್ತಿದ್ದಾಗ, ಪಂದ್ಯವನ್ನು ಮುಗಿಸುವುದು ಬಾಬರ್ ಅವರ ಜವಾಬ್ದಾರಿಯಾಗಿತ್ತು, ಆದರೆ ಹಾಗೇ ಮಾಡುವಲ್ಲಿ ಬಾಬರ್ ವಿಫಲರಾದರು. ತಂಡದ ಸ್ಕೋರ್ 116 ರನ್‌ಗಳಾಗಿದ್ದಾಗ ನಾಯಕ ಬಾಬರ್ ಅಜಮ್ 15 ನೇ ಓವರ್‌ನಲ್ಲಿ ಔಟಾದರು.

ಇಂತಹ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ

ಪಂದ್ಯ ಮುಗಿದ ಬಳಿಕ ಈ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು. ‘ವಿರಾಟ್ ಕೊಹ್ಲಿ ನಿಮ್ಮಂತೆಯೇ ಆರಂಭಿಕರಾಗಿ ಆಡುತ್ತಾರೆ, ಅವರು ಪಂದ್ಯಗಳನ್ನು ಮುಗಿಸಿದ ನಂತರವೇ ಡಗೌಟ್​ಗೆ ಮರಳುತ್ತಾರೆ. ಆದರೆ ನಿಮಗೆ ಮಾತ್ರ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಿದ್ದರೂ ಜನರು ನಿಮ್ಮನ್ನು ಕೊಹ್ಲಿಯೊಂದಿಗೆ ಹೋಲಿಸುತ್ತಾರೆ. ಈ ಹೋಲಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪತ್ರಕರ್ತ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಕೋಪಗೊಂಡ ಬಾಬರ್, ಇಂತಹ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಹೋಲಿಕೆ ಮಾಡುವುದನ್ನು ನಿಲ್ಲಿಸಿ. ನಾನು ಪಂದ್ಯಗಳನ್ನು ಮುಗಿಸಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ. ನಾನು ಯಾವಾಗಲೂ ಪಂದ್ಯಗಳನ್ನು ಮುಗಿಸಲು ಶ್ರಮಿಸುತ್ತೇನೆ ಮತ್ತು ನಾನು ಹಲವು ಬಾರಿ ಅದನ್ನು ಮಾಡಿದ್ದೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Thu, 9 April 26

Follow Us