
ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ರ ಕ್ವಾಲಿಫೈಯರ್ -2 ರಲ್ಲಿ ಅದ್ಭುತ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಪಂಜಾಬ್ ಕಿಂಗ್ಸ್ ತಂಡ ಇದೀಗ ಫೈನಲ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs PBKS) ಮುಖಾಮುಖಿಯಾಗಲಿವೆ. ಆದಾಗ್ಯೂ ಈ ಪಂದ್ಯ ವೈಯಕ್ತಿಕವಾಗಿಯೂ ಉಭಯ ತಂಡಗಳ ನಾಯಕರಿಗೆ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ವಿರುದ್ಧ ಸೋತಿರುವ ರಜತ್ ಪಾಟಿದರ್ಗೆ (Rajat Patidar) ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶವಿದೆ.
ಈ ಐಪಿಎಲ್ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್‌ಗೆ ನಾಯಕತ್ವ ವಹಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ರಜತ್ ಪಾಟಿದಾರ್ ನಿರ್ವಹಿಸುತ್ತಿದ್ದಾರೆ. ಎರಡೂ ತಂಡಗಳ ಆಟಗಾರರು ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಎರಡೂ ತಂಡಗಳು ಇನ್ನೂ ಒಮ್ಮೆಯೂ ಐಪಿಎಲ್ ಟ್ರೋಫಿಯನ್ನು ಗೆಲ್ಲದ ಕಾರಣ ಈ ಫೈನಲ್ ಇನ್ನಷ್ಟು ರೋಮಾಂಚನಕಾರಿಯಾಗಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟಿದಾರ್ ಇತಿಹಾಸ ರಚಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ನಡುವೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024 ರ ಅಂತಿಮ ಪಂದ್ಯ ನಡೆದಿತ್ತು. ಮಧ್ಯಪ್ರದೇಶ ತಂಡವನ್ನು ರಜತ್ ಪಟಿದಾರ್ ಮುನ್ನಡೆಸಿದರೆ, ಮುಂಬೈ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು. ನಾಯಕ ರಜತ್ ಪಟಿದಾರ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 81* ರನ್‌ಗಳ ಕೊಡುಗೆ ನೀಡಿದರು.
RCB Vs PBKS, IPL 2025 Final Live Score: ಆರ್ಸಿಬಿ- ಪಂಜಾಬ್ ನಡುವೆ ಫೈನಲ್ ಫೈಟ್
ಆದರೆ ರಜತ್ ಪಾಟಿದಾರ್ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಮುಂಬೈ ಈ ಪಂದ್ಯವನ್ನು 5 ವಿಕೆಟ್‌ಗಳೊಂದಿಗೆ ಗೆದ್ದುಕೊಂಡಿತು. ಶ್ರೇಯಸ್ ಅಯ್ಯರ್ ಮಧ್ಯಪ್ರದೇಶದ ವಿರುದ್ಧ ಕೇವಲ 16 ರನ್ ಗಳಿಸಿದರೂ, ಉಳಿದ ಮುಂಬೈ ಆಟಗಾರರು ಮಾರಕ ಬ್ಯಾಟಿಂಗ್ ಮಾಡಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈಗ ರಜತ್ ಪಾಟಿದಾರ್‌ಗೆ ಐಪಿಎಲ್ 2025 ರ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶವಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Tue, 3 June 25