ಅಬ್ಬಾ…! ವಿಶ್ವಕಪ್ ಫೈನಲ್​ನಲ್ಲಿ ಭಾರತವನ್ನು ಮಣಿಸಲು ಆಸ್ಟ್ರೇಲಿಯಾ ಮಾಡಿದ್ದ ಪ್ಲಾನ್ ಎಂತಾದ್ದು ಗೊತ್ತಾ?

|

Updated on: Nov 24, 2023 | 11:34 AM

IND vs AUS Final, ICC World Cup 2023: 2023 ರ ವಿಶ್ವಕಪ್‌ನಲ್ಲಿ ಕೇವಲ 1 ಪಂದ್ಯವನ್ನು ಆಡುವ ಅವಕಾಶ ಪಡೆದಿದ್ದ ಆರ್. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಸೀಸ್ ಗೆಲುವಿನ ಹಿಂದಿರುವ ತಂತ್ರಗಾರಿಕೆಯನ್ನು ಬಿಚ್ಚಿಟ್ಟಿದ್ದಾರೆ.

ಅಬ್ಬಾ...! ವಿಶ್ವಕಪ್ ಫೈನಲ್​ನಲ್ಲಿ ಭಾರತವನ್ನು ಮಣಿಸಲು ಆಸ್ಟ್ರೇಲಿಯಾ ಮಾಡಿದ್ದ ಪ್ಲಾನ್ ಎಂತಾದ್ದು ಗೊತ್ತಾ?
ಆಸ್ಟ್ರೇಲಿಯಾ ತಂಡ
Follow us on

2023 ರ ಏಕದಿನ  ವಿಶ್ವಕಪ್ (ICC World Cup 2023) ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲನ್ನು ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ (India vs Australia) ವಿರುದ್ಧ 6 ವಿಕೆಟ್‌ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ ದೊಡ್ಡ ಸ್ಕೋರ್ ಕಲೆಹಾಕುವಲ್ಲಿ ವಿಫಲವಾಯಿತು. ಆ ಬಳಿಕ ಬೌಲರ್‌ಗಳು ಸಹ ತಾವು ಹಿಂದಿನ ಪಂದ್ಯಗಳಲ್ಲಿ ನೀಡಿದ್ದ ಪ್ರದರ್ಶನವನ್ನು ಮತ್ತೊಮ್ಮೆ ಪ್ರಸ್ತುತಿ ಪಡಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಬಳಿಕ ಮಾತನಾಡಿದ ಅನುಭವಿಗಳೆಲ್ಲರು ಪಂದ್ಯದಲ್ಲಿ ಟಾಸ್ ಮುಖ್ಯ ಪಾತ್ರವಹಸಿತು. ಆಸ್ಟ್ರೇಲಿಯಾ ಅದೃಷ್ಟದಿಂದ ಗೆಲುವು ಸಾಧಿಸಿತು. ಈ ದಿನ ಆಸ್ಟ್ರೇಲಿಯಾ ತಂಡದ್ದಾಗಿತ್ತು ಎಂಬ ವಿವಿದ ಕಾರಣಗಳನ್ನು ನೀಡಿದ್ದರು. ಆದರೆ ವಿಶ್ವಕಪ್ ಗೆಲ್ಲಲು ಆಸ್ಟ್ರೇಲಿಯಾ ಮಾಡಿದ್ದ ಪ್ಲಾನ್ ಎಂತದ್ದು ಎಂಬ ರಹಸ್ಯವನ್ನು ಭಾರತ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ (R Ashwin) ಬಹಿರಂಗಪಡಿಸಿದ್ದಾರೆ.

ಮಧ್ಯ ಇನಿಂಗ್ಸ್‌ನಲ್ಲಿಯೇ ತಿಳಿದುಕೊಂಡೆ

2023 ರ ವಿಶ್ವಕಪ್‌ನಲ್ಲಿ ಕೇವಲ 1 ಪಂದ್ಯವನ್ನು ಆಡುವ ಅವಕಾಶ ಪಡೆದಿದ್ದ ಆರ್. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಸೀಸ್ ಗೆಲುವಿನ ಹಿಂದಿರುವ ತಂತ್ರಗಾರಿಕೆಯನ್ನು ಬಿಚ್ಚಿಟ್ಟರು. ‘ನಾನು ಪಂದ್ಯದ ಫಲಿತಾಂಶ ಏನಾಗುತ್ತದೆ ಎಂದು ಮಧ್ಯ ಇನಿಂಗ್ಸ್‌ನಲ್ಲಿಯೇ ತಿಳಿದುಕೊಂಡೆ. ಈ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಮ್ಮನ್ನು ಸಂಪೂರ್ಣವಾಗಿ ಯಾಮಾರಿಸಿದೆ ಎಂಬುದು ನನ್ನ ಅಭಿಪ್ರಾಯ. ಮಿಡ್ ಇನ್ನಿಂಗ್ಸ್ ಸಮಯದಲ್ಲಿ ನಾನು ಆಸ್ಟ್ರೇಲಿಯಾ ತಂಡ ನಿರ್ಧೇಶಕ ಜಾರ್ಜ್ ಬೈಲಿ ಅವರೊಂದಿಗೆ ಮಾತನಾಡಿ, ನೀವು ಎಂದಿನಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲಿಲ್ಲ ಏಕೆ ಎಂದು ಅವರ ಬಳಿ ಕೇಳಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ

ಇದಕ್ಕೆ ಉತ್ತರಿಸಿದ ಬೈಲಿ, ನಾವು ಇಲ್ಲಿ ಹಲವು ಬಾರಿ ಐಪಿಎಲ್ ಮತ್ತು ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದೇವೆ. ಕೆಂಪು ಮಣ್ಣಿನಿಂದ ಮಾಡಿದ ಪಿಚ್‌ಗಳು ಒಡೆಯುತ್ತವೆ. ಆದರೆ ಕಪ್ಪು ಮಣ್ಣಿನಿಂದ ಮಾಡಿದ ಪಿಚ್‌ಗಳಲ್ಲಿ ಹಾಗೆ ಆಗುವುದಿಲ್ಲ. ಅಲ್ಲದೆ ಪಿಚ್ ಕಪ್ಪು ಜೇಡಿಮಣ್ಣಿನಿಂದ ಕೂಡಿರುವುದರಿಂದ ಅಂತಹ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ. ಅಲ್ಲದೆ ಲೈಟ್ಸ್ ಕೆಳಗೆ ಬಾಲ್,​ ಬ್ಯಾಟ್​ಗೆ ಚೆನ್ನಾಗಿನ ಬರುತ್ತದೆ ಎಂಬುದು ನಮಗೆ ತಿಳಿದಿತ್ತು.

ಹಾಗಾಗಿ ನಾವು ಮೊದಲು ಬೌಲಿಂಗ್ ತೆಗೆದುಕೊಂಡೆವು

‘ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಕೆಂಪು ಮಣ್ಣಿನ ಪಿಚ್‌ನಲ್ಲಿ ನಡೆದಿತ್ತು. ಹಾಗಾಗಿ ಕೆಂಪು ಮಣ್ಣಿನ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವುದು ಉತ್ತಮ ಎಂದು ನಾವು ಅರಿತುಕೊಂಡೆವು. ಅಲ್ಲದೆ ಕಪ್ಪು ಮಣ್ಣಿನ ಪಿಚ್‌ನಲ್ಲಿ ನಂತರ ಬ್ಯಾಟಿಂಗ್ ಮಾಡುವುದು ಉತ್ತಮ ಎಂದು ನಮಗೆ ತಿಳಿದಿತ್ತು. ಹಾಗಾಗಿ ನಾವು ಮೊದಲು ಬೌಲಿಂಗ್ ತೆಗೆದುಕೊಂಡೆವು ಎಂದು ಬೈಲಿ ಹೇಳಿದರು ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.

ಕಮ್ಮಿನ್ಸ್ ತಂತ್ರಗಾರಿಕೆ ಅದ್ಭುತವಾಗಿತ್ತು

ಹಾಗೆಯೇ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ತಮ್ಮ ಅಸಾಂಪ್ರದಾಯಿಕ ಫೀಲ್ಡ್ ಸೆಟ್ಟಿಂಗ್‌ನೊಂದಿಗೆ ಭಾರತವನ್ನು ಹೇಗೆ ಖೆಡ್ಡಾಕೆ ಕೆಡುವಿದರು ಎಂಬುದನ್ನು ವಿವರಿಸಿದ್ದಾರೆ. ‘ಪ್ಯಾಟ್ ಕಮ್ಮಿನ್ಸ್​ ವಿಶ್ವಕಪ್‌ ಆರಂಭಿಕ ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದರು. ಆದರೆ ಫೈನಲ್‌ಗೂ ಮುನ್ನ ನಡೆದ ಕೊನೆಯ ನಾಲ್ಕೈದು ಪಂದ್ಯಗಳಲ್ಲಿ ಅವರು ಬೌಲ್ ಮಾಡಿದ ಸುಮಾರು 50% ಬಾಲ್‌ಗಳು ಕಟ್ಟರ್‌ಗಳು.

ಆನ್‌ಸೈಡ್‌ನಲ್ಲಿ ಐದು ಫೀಲ್ಡರ್‌ಗಳು

ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ತಂತ್ರಗಾರಿಕೆಯನ್ನು ವೀಕ್ಷಕ ವಿವರಣೆಗಾರರು ಹೇಗೆ ವಿವರಿಸಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇಡೀ ಪಂದ್ಯದಲ್ಲಿ ಕಮ್ಮಿನ್ಸ್ ಆಫ್‌ಸ್ಪಿನ್ನರ್‌ನಂತೆ ಹೆಚ್ಚಾಗಿ ಲೆಗ್‌ಸೈಡ್ ಫೀಲ್ಡ್‌ಗೆ ಬೌಲ್ ಮಾಡಿದರು, ಸ್ಟಂಪ್ ಲೈನ್‌ನಲ್ಲಿ ಬೌಲಿಂಗ್ ಮಾಡಿದರು. ತಮ್ಮ ಬೌಲಿಂಗ್​ಗೆ ತಕ್ಕನಾಗಿ ಫೀಲ್ಡಿಂಗ್ ನಿಲ್ಲಿಸಿದ್ದರು. ಆನ್‌ಸೈಡ್‌ನಲ್ಲಿ ಐದು ಫೀಲ್ಡರ್‌ಗಳನ್ನು ಸ್ಕ್ವೇರ್ ಲೆಗ್, ಮಿಡ್‌ವಿಕೆಟ್, ಮಿಡ್-ಆನ್, ಡೀಪ್ ಸ್ಕ್ವೇರ್ ಲೆಗ್ ಮತ್ತು ಲಾಂಗ್ ಲೆಗ್​ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತಕ್ಕನಾಗಿ ತಮ್ಮ ಹತ್ತು ಓವರ್‌ಗಳನ್ನು ಮಿಡ್-ಆಫ್ ಇಲ್ಲದೆ ಬೌಲ್ ಮಾಡಿದರು.

34 ರನ್‌ ನೀಡಿದ ಕಮ್ಮಿನ್ಸ್ 2 ವಿಕೆಟ್‌ ಪಡೆದರು

ಮಿಡ್-ಆಫ್ ಇಲ್ಲದೆ ಪ್ರಧಾನವಾಗಿ ಲೆಗ್ ಸೈಡ್ ಫೀಲ್ಡ್ ಹೊಂದಿದ್ದರೂ, ಕಮ್ಮಿನ್ಸ್ ಒಂದೇ ಒಂದು ಬೌಂಡರಿಯನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ ತಮ್ಮ 10 ಓವರ್​ ಖೋಟಾದಲ್ಲಿ 34 ರನ್‌ ನೀಡಿದ ಕಮ್ಮಿನ್ಸ್ 2 ವಿಕೆಟ್‌ ಪಡೆದರು. ಆ ಎರಡು ವಿಕೆಟ್‌ಗಳು ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿಯದ್ದಾಗಿತ್ತು. ಬ್ಯಾಕ್ ಆಫ್ ಲೆಂಗ್ತ್ ಚೆಂಡನ್ನು ಡೀಪ್ ಥರ್ಡ್‌ಮ್ಯಾನ್ ಕಡೆ ಆಡುವ ಯತ್ನದಲ್ಲಿ ಶ್ರೇಯಸ್ ಔಟಾದರೆ, ಕೊಹ್ಲಿ ಕಡಿಮೆ ಬೌನ್ಸ್ ಇದ್ದ ಲೆಂಗ್ತ್ ಬಾಲ್‌ನಲ್ಲಿ ಬೌಲ್ಡ್ ಆದರು.

ಮುಂದುವರೆದು ಮಾತನಾಡಿದ ಅಶ್ವಿನ್, ಲೆಗ್ ಸೈಡ್ ಫೀಲ್ಡ್‌ಗೆ ಬೌಲ್ ಮಾಡಲು ಯೋಜಿಸುವುದು ಸುಲಭ. ಅದರಲ್ಲೂ ಟೆಸ್ಟ್ ಪಂದ್ಯದಲ್ಲಿ ಆ ರೀತಿಯಲ್ಲಿ ಬೌಲ್ ಮಾಡುವುದು ಸುಲಭ. ಏಕೆಂದರೆ ನೀವು ಒಂದೆರಡು ಎಸೆತಗಳನ್ನು ಡೌನ್ ಲೆಗ್ ಬೌಲ್ ಮಾಡಿದರೂ ಅಂಪೈರ್‌ಗಳು ಅದನ್ನು ವೈಡ್ ನೀಡುವುದಿಲ್ಲ. ಆದರೆ ಏಕದಿನದಲ್ಲಿ ವೈಡ್ ಡೌನ್ ದಿ ಲೆಗ್ ಬೌಲ್ ಮಾಡದಿರುವುದು. ಹಾಗೆಯೇ ಬೌಲಿಂಗ್​ಗೆ ತಕ್ಕಂತೆ ಫೀಲ್ಡರ್ ನಿಲ್ಲಿಸಿ, ಬ್ಯಾಟರ್‌ಗಳಿಗೆ ರನ್ ಕಲೆಹಾಕಲು ಅವಕಾಶ ನೀಡದಿರುವುದು ಅದ್ಭುತವಾಗಿತ್ತು. ನನ್ನ ಅನುಭವದಲ್ಲಿ, ಬೌಲರ್‌ಗಳು ಅಂತಹ ಫೀಲ್ಡ್ ಸೆಟ್ಟಿಂಗ್​ನಲ್ಲಿ ಕನಿಷ್ಠ ಒಂದು ಅಥವಾ ಎರಡು ಬೌಂಡರಿಗಳನ್ನು ನೀಡುವುದನ್ನು ನಾನು ನೋಡಿದ್ದೇನೆ. ಆದರೆ ಕಮ್ಮಿನ್ಸ್ ಮಾಡಿದ ತಂತ್ರಗಾರಿಕೆ ಅದ್ಭುತವಾಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:31 am, Fri, 24 November 23