
ಪ್ರಸ್ತುತ ಭಾರತ ಮಹಿಳಾ, ಪುರುಷ ಮತ್ತು ಅಂಡರ್-19 ತಂಡಗಳು ಇಂಗ್ಲೆಂಡ್ ಪ್ರವಾಸದಲ್ಲಿವೆ. ಪುರುಷರ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದರೆ, ಅಂಡರ್-19 ತಂಡ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಮತ್ತೊಂದೆಡೆ, ಜುಲೈ 10 ರಂದು ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಮಹಿಳಾ ತಂಡ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಏತನ್ಮಧ್ಯೆ ಬಿಸಿಸಿಐ (BCCI), ಭಾರತ ಮಹಿಳಾ ತಂಡದ ಮುಂದಿನ ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ತಂಡವನ್ನು ಸಹ ಪ್ರಕಟಿಸಿದ್ದು, ಆಲ್ರೌಂಡರ್ ರಾಧಾ ಯಾದವ್ (Radha Yadav) ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ವಾಸ್ತವವಾಗಿ ಬಿಸಿಸಿಐ ಆಯ್ಕೆ ಸಮಿತಿಯು ಜುಲೈ 10 ರಂದು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಮಹಿಳಾ ಎ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತ ಮಹಿಳಾ ಎ ತಂಡವು, ಆಸ್ಟ್ರೇಲಿಯಾ ಎ ತಂಡವನ್ನು ಎದುರಿಸಲಿದ್ದು, ಎರಡೂ ತಂಡಗಳು ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿವೆ. ಈ ಸರಣಿಗಳು ತಲಾ 3 ಪಂದ್ಯಗಳನ್ನು ಒಳಗೊಂಡಿರುತ್ತವೆ. ಅದರ ನಂತರ, ಪ್ರವಾಸವು 4 ದಿನಗಳ ಪಂದ್ಯದೊಂದಿಗೆ ಕೊನೆಗೊಳ್ಳುತ್ತದೆ. ಈ ಪ್ರವಾಸದಲ್ಲಿ ಭಾರತ ಎ ತಂಡದ ನಾಯಕತ್ವವನ್ನು ರಾಧಾ ಯಾದವ್ ಅವರಿಗೆ ವಹಿಸಿದ್ದು, ಮಿನ್ನು ಮಣಿ ಅವರನ್ನು ಉಪನಾಯಕಿಯನ್ನಾಗಿ ನೇಮಿಸಲಾಗಿದೆ.
ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸವು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. 3 ಪಂದ್ಯಗಳ ಟಿ20 ಸರಣಿಯು ಆಗಸ್ಟ್ 7 ರಿಂದ 10 ರವರೆಗೆ ನಡೆಯಲಿದೆ. ಈ ಮೂರೂ ಪಂದ್ಯಗಳು ಒಂದೇ ಸ್ಥಳದಲ್ಲಿ ನಡೆಯಲಿವೆ. ಅದಾದ ನಂತರ, ಆಗಸ್ಟ್ 13 ರಿಂದ 17 ರವರೆಗೆ ಏಕದಿನ ಸರಣಿಯ 3 ಪಂದ್ಯಗಳು ನಡೆಯಲಿವೆ. ನಂತರ, ಆಗಸ್ಟ್ 21 ರಿಂದ 24 ರವರೆಗೆ 4 ದಿನಗಳ ಪಂದ್ಯ ನಡೆಯಲಿದೆ.
IND vs BAN: ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಬಿಸಿಸಿಐ
ಟಿ20 ಸರಣಿಗೆ ಭಾರತ ಮಹಿಳಾ ಎ ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶೆಫಾಲಿ ವರ್ಮಾ, ಡಿ ವೃಂದಾ, ಸಜ್ನಾ ಸಜೀವನ್, ಉಮಾ ಛೆಟ್ರಿ (ವಿಕೆಟ್ ಕೀಪರ್), ರಾಘವಿ ಬಿಶ್ತ್, ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ತನುಜಾ ಕನ್ವರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟಿಟಾಸ್ ಸಾಧು.
ಏಕದಿನ ಮತ್ತು ಬಹುದಿನಗಳ ಪಂದ್ಯಗಳಿಗಾಗಿ ಭಾರತ ಮಹಿಳಾ ಎ ತಂಡ: ರಾಧಾ ಯಾದವ್ (ನಾಯಕ), ಮಿನ್ನು ಮಣಿ (ಉಪನಾಯಕ), ಶಫಾಲಿ ವರ್ಮಾ, ತೇಜಲ್ ಹಸ್ಬಾನಿಸ್, ರಾಘವಿ ಬಿಸ್ತ್, ತನುಶ್ರೀ ಸರ್ಕಾರ್, ಉಮಾ ಛೆಟ್ರಿ (ವಿಕೆಟ್ ಕೀಪರ್), ಪ್ರಿಯಾ ಮಿಶ್ರಾ, ತನುಜಾ ಕನ್ವರ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ಧಾರಾ ಗುಜ್ಜರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟಿಟಾಸ್ ಸಾಧು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Thu, 10 July 25