IND vs BAN: ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಬಿಸಿಸಿಐ
India's tour of Bangladesh rescheduled: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಆಗಸ್ಟ್ 2025ರಲ್ಲಿ ನಡೆಯಬೇಕಿದ್ದ ಏಕದಿನ ಮತ್ತು ಟಿ20 ಸರಣಿಯನ್ನು ಬಿಸಿಸಿಐ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಸೆಪ್ಟೆಂಬರ್ 2026ಕ್ಕೆ ಮುಂದೂಡಿವೆ. ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳು ಕೊನೆಗೂ ನಿಜವಾಗಿವೆ. ವಾಸ್ತವವಾಗಿ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಟೀಂ ಇಂಡಿಯಾ, ಏಕದಿನ ಹಾಗೂ ಟಿ20 ಸರಣಿಗಾಗಿ ಬರುವ ಆಗಸ್ಟ್ ತಿಂಗಳಂದು ಬಾಂಗ್ಲಾದೇಶ ಪ್ರವಾಸವನ್ನು (India’s tour of Bangladesh) ಮಾಡಬೇಕಿತ್ತು. ಆದರೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರವಾಸವನ್ನು ಮುಂದೂಡಿರುವುದಾಗಿ ಬಿಸಿಸಿಐ (BCCI) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಆ ಪ್ರಕಾರ ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಭಾರತದ ಬಾಂಗ್ಲಾದೇಶ ಪ್ರವಾಸ ಇದೀಗ 13 ತಿಂಗಳ ಕಾಲ ಮುಂದೂಡಲಾಗಿದೆ. ಅಲ್ಲದೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಸಿಸಿಐ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಸರಣಿಯನ್ನು ಮುಂದೂಡಲು ಕಾರಣವೇನು?
ಪ್ರವಾಸವನ್ನು ಮುಂದೂಡಿರುವ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಬಿಸಿಸಿಐ, ‘ಎರಡೂ ಕ್ರಿಕೆಟ್ ಮಂಡಳಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಂಡಿವೆ. ಮೊದಲು ನಿರ್ಧರಿಸಿದಂತೆ ಆಗಸ್ಟ್ ತಿಂಗಳಲ್ಲಿ ಟೀಂ ಇಂಡಿಯಾ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಬೇಕಿತ್ತು, ಆದರೆ ಈಗ ಈ ಸರಣಿಯನ್ನು ಆಗಸ್ಟ್ 2025 ರ ಬದಲಿಗೆ ಸೆಪ್ಟೆಂಬರ್ 2026 ರಲ್ಲಿ ಆಡಲಾಗುವುದು. ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಎರಡೂ ಕ್ರಿಕೆಟ್ ತಂಡಗಳು ತಿಳಿಸಿವೆ. ಸರಣಿಯ ಹೊಸ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
🚨 NEWS 🚨
Rescheduling of India’s white-ball Tour of Bangladesh.
Details 🔽 #TeamIndiahttps://t.co/qaOWJBgJdu
— BCCI (@BCCI) July 5, 2025
ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ
ಆದಾಗ್ಯೂ, ಕಳೆದ ಹಲವಾರು ವಾರಗಳಿಂದ ಈ ಸರಣಿಯನ್ನು ಮುಂದೂಡುವ ಬಗ್ಗೆ ನಾನಾ ಕಾರಣಗಳು ಕೇಳಿಬಂದಿದ್ದವು. ಅದರಲ್ಲಿ ಒಂದು ಕಾರಣ ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿನ ಉದ್ವಿಗ್ನತೆ ಎಂದು ಹೇಳಲಾಗುತ್ತಿತ್ತು. ಕಳೆದ ವರ್ಷ ನಡೆದ ದಂಗೆಯ ನಂತರ, ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಬಿರುಕು ಹೆಚ್ಚುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಹತ್ಯೆಗಳು ಮತ್ತು ಅಲ್ಲಿನ ನಾಯಕರ ಭಾರತ ವಿರೋಧಿ ಹೇಳಿಕೆಗಳಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಿ ತಪ್ಪಿತ್ತು. ಈ ಕಾರಣದಿಂದಾಗಿ, ಟೀಂ ಇಂಡಿಯಾವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ವರದಿಯಾಗಿತ್ತು.
IND vs BAN: ಭಾರತ- ಬಾಂಗ್ಲಾ ನಡುವಿನ ಏಕದಿನ, ಟಿ20 ಸರಣಿ ಭಾಗಶಃ ರದ್ದು
ರೋಹಿತ್-ವಿರಾಟ್ ಆಟಕ್ಕಾಗಿ ಕಾಯಲೇಬೇಕು
ಈ ಸರಣಿ ಮುಂದೂಡಿಕೆಯಿಂದ ಟೀಂ ಇಂಡಿಯಾ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯಬೇಕಾಗುತ್ತದೆ. ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಈಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸರಣಿ ಮುಂದೂಡಿಕೆಯಿಂದಾಗಿ, ಇಬ್ಬರೂ ಮತ್ತೆ ಮೈದಾನಕ್ಕೆ ಮರಳಲು ಸಮಯ ತೆಗೆದುಕೊಳ್ಳುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಆಗ ರೋಹಿತ್, ವಿರಾಟ್ ಆಡುವುದನ್ನು ನಾವು ಕಣ್ತುಂಬಿಕೊಳ್ಳಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sat, 5 July 25