ಪಾಕಿಸ್ತಾನ್ ವಿರುದ್ಧ​ ಭರ್ಜರಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಗುರ್ಬಾಝ್

| Updated By: ಝಾಹಿರ್ ಯೂಸುಫ್

Updated on: Aug 24, 2023 | 8:15 PM

Rahmanullah Gurbaz: ಈ ಭರ್ಜರಿ ಶತಕದೊಂದಿಗೆ ಪಾಕಿಸ್ತಾನ್ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಅಫ್ಘಾನಿಸ್ತಾನ್ ಬ್ಯಾಟರ್ ಎಂಬ ದಾಖಲೆಯನ್ನು ರಹಮಾನುಲ್ಲಾ ಗುರ್ಬಾಝ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಪಾಕ್ ವಿರುದ್ಧ 150 ಕ್ಕೂ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನ್ ವಿರುದ್ಧ​ ಭರ್ಜರಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಗುರ್ಬಾಝ್
Rahmanullah Gurbaz
Follow us on

ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ರಹಮಾನುಲ್ಲಾ ಗುರ್ಬಾಝ್ (Rahmanullah Gurbaz) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಗುರ್ಬಾಝ್ ಹಾಗೂ ಇಬ್ರಾಹಿಂ ಝರ್ದಾನ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು.

ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ ಆ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಮೂಡಿ ಬಂತು. ಆ ನಂತರ ಗುರ್ಬಾಝ್ ಆರ್ಭಟ ಶುರುವಾಯಿತು. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಪಾಕ್​ ಬೌಲರ್​ಗಳನ್ನು ಅಫ್ಘಾನ್ ಬ್ಯಾಟರ್ ಮನಸೊ ಇಚ್ಛೆ ದಂಡಿಸಿದರು.

ಈ ಮೂಲಕ 122 ಎಸೆತಗಳಲ್ಲಿ ರಹಮಾನುಲ್ಲಾ ಗುರ್ಬಾಝ್ ಶತಕ ಪೂರೈಸಿದರು. ಮತ್ತೊಂದೆಡೆ ಇಬ್ರಾಹಿಂ ಝದ್ರಾನ್ ಕೂಡ ಉತ್ತಮ ಸಾಥ್ ನೀಡಿದರು. ಪರಿಣಾಮ 37 ಓವರ್​ಗಳ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ ಅಫ್ಘಾನಿಸ್ತಾನ್ ತಂಡ 206 ರನ್​ ಕಲೆಹಾಕಿತು.

ಅಫ್ಘಾನಿಸ್ತಾನ್ ತಂಡದ ಮೊತ್ತ 227 ರನ್ ಆಗಿದ್ದ ವೇಳೆ ಇಬ್ರಾಹಿಂ ಝದ್ರಾನ್ (80) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗುರ್ಬಾಝ್ 151 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 151 ರನ್ ಬಾರಿಸಿದರು. ಆ ಬಳಿಕ ಬಂದ ಮೊಹಮ್ಮದ್ ನಬಿ 29 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿತು.

ದಾಖಲೆ ಬರೆದ ಗುರ್ಬಾಝ್:

ಈ ಭರ್ಜರಿ ಶತಕದೊಂದಿಗೆ ಪಾಕಿಸ್ತಾನ್ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಅಫ್ಘಾನಿಸ್ತಾನ್ ಬ್ಯಾಟರ್ ಎಂಬ ದಾಖಲೆಯನ್ನು ರಹಮಾನುಲ್ಲಾ ಗುರ್ಬಾಝ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಪಾಕ್ ವಿರುದ್ಧ 150 ಕ್ಕೂ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ರಿಯಾಝ್ ಹಸನ್ , ಹಶ್ಮತುಲ್ಲಾ ಶಾಹಿದಿ (ನಾಯಕ) , ಇಕ್ರಮ್ ಅಲಿಖಿಲ್ , ಮೊಹಮ್ಮದ್ ನಬಿ , ರಶೀದ್ ಖಾನ್ , ಮುಜೀಬ್ ಉರ್ ರಹಮಾನ್ , ಫಜಲ್ಹಕ್ ಫಾರೂಕಿ , ಅಬ್ದುಲ್ ರಹಮಾನ್ , ಶಾಹಿದುಲ್ಲಾ ಕಮಾಲ್.

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಉಸಾಮಾ ಮಿರ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.

 

Published On - 8:03 pm, Thu, 24 August 23