ಟೀಮ್ ಇಂಡಿಯಾದ (Team India) ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid) ನೇಮಕಗೊಂಡಿದ್ದಾರೆ. ಬುಧವಾರ ನಡೆದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದರಂತೆ ನ್ಯೂಜಿಲೆಂಡ್ ವಿರುದ್ದ ಸರಣಿಯೊಂದಿಗೆ ದ್ರಾವಿಡ್ ಟೀಮ್ ಇಂಡಿಯಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ, ರಾಹುಲ್ ದ್ರಾವಿಡ್‌ಗಿಂತ ಉತ್ತಮ ವ್ಯಕ್ತಿ ಇಲ್ಲ. ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಸಂತೋಷವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್‌ಗಳು ನಡೆಯಲಿದ್ದು, ಇದಕ್ಕಾಗಿ ಉತ್ತಮ ತಂಡವನ್ನು ರೂಪಿಸಬೇಕಿದೆ. ಇದಕ್ಕೆ ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿ. ಅವರ ಸಾರಥ್ಯದಲ್ಲಿ ಭಾರತ ತಂಡವು ಎಲ್ಲಾ ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಮಂಡಳಿಯು ಶೀಘ್ರದಲ್ಲೇ ಇತರ ಕೋಚಿಂಗ್ ಸಿಬ್ಬಂದಿಯ ನೇಮಕಾತಿಗಳನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ನೇಮಕವನ್ನು ನಾನು ಸ್ವಾಗತಿಸುತ್ತೇನೆ. ರಾಹುಲ್ ಅವರು ಅತ್ಯುತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ಎನ್‌ಸಿಎಯಲ್ಲಿ ರಾಹುಲ್ ಅವರ ಪ್ರಯತ್ನವು ಹಲವಾರು ಯುವ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸಿದೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರ ಹೊಸ ಕಾರ್ಯವು ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ಭರವಸೆ ನನಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಹೊಸ ಹುದ್ದೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದ್ರಾವಿಡ್, ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ದೊಡ್ಡ ಗೌರವ. ನಾನು ಈ ಪಾತ್ರಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಶಾಸ್ತ್ರಿ ಅವರ ಅಡಿಯಲ್ಲಿ, ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದನ್ನು ಮುಂದಕ್ಕೆ ಕೊಂಡೊಯ್ಯಲು ತಂಡದೊಂದಿಗೆ ಕೆಲಸ ಮಾಡಲು ನಾನು ಭಾವಿಸುತ್ತೇನೆ. NCA, U19 ಮತ್ತು ಇಂಡಿಯಾ ಎ ತಂಡಗಳಲ್ಲಿ ನಾನು ಕಾರ್ಯ ನಿರ್ವಹಿಸಿದ್ದೇನೆ. ಮುಂದಿನ ಎರಡು ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಿವೆ. ಈ ಟೂರ್ನಿಗಾಗಿ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ಅತ್ತ ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆಲಸ ಶುರುವಾಗಲಿದೆ.
ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಕಳೆದ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಲು ಆಸಕ್ತಿವಹಿಸಿದ್ದರು. ಇದೀಗ ಅಂತಿಮವಾಗಿ ಅವಿರೋಧವಾಗಿ ದ್ರಾವಿಡ್ ಅವರನ್ನು ಬಿಸಿಸಿಐ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
(Rahul Dravid appointed as Head Coach of Team India)
Published On - 9:13 pm, Wed, 3 November 21