Rahul Dravid: ನಾನು ನಿರುದ್ಯೋಗಿ, ಕೆಲಸ ಇದ್ರೆ ತಿಳಿಸಿ: ರಾಹುಲ್ ದ್ರಾವಿಡ್

Rahul Dravid: ವಿಶ್ವಕಪ್ ಗೆಲ್ಲಬೇಕೆಂಬ ರಾಹುಲ್ ದ್ರಾವಿಡ್ ಅವರ ಬಹುದೊಡ್ಡ ಕನಸು ಕೊನೆಗೂ ಈಡೇರಿದೆ. ಈ ಹಿಂದೆ ಭಾರತದ ಪರ ವಿಶ್ವಕಪ್​ ಟೂರ್ನಿಗಳನ್ನು ಆಡಿದರೂ ದ್ರಾವಿಡ್ ಅವರಿಗೆ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ರಾಹುಲ್ ದ್ರಾವಿಡ್ ಕೋಚ್ ಆಗಿ ತಮ್ಮ ವಿಶ್ವಕಪ್ ಗೆಲ್ಲುವ ಕನಸನ್ನು ಈಡೇರಿಸಿಕೊಂಡಿದ್ದಾರೆ.

Rahul Dravid: ನಾನು ನಿರುದ್ಯೋಗಿ, ಕೆಲಸ ಇದ್ರೆ ತಿಳಿಸಿ: ರಾಹುಲ್ ದ್ರಾವಿಡ್
Rahul Dravid

Updated on: Jul 02, 2024 | 10:09 AM

ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಾರ್ಯಾವಧಿ ಮುಗಿದಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ದ್ರಾವಿಡ್ ಕೋಚ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ವಿವಿಎಸ್​ ಲಕ್ಷ್ಮಣ್ ಅವರನ್ನು ತಾತ್ಕಾಲಿಕ ಕೋಚ್ ಆಗಿ ನೇಮಿಸಲಾಗಿದೆ.

ಹಾಗೆಯೇ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ನೂತನ ಕೋಚ್ ಅನ್ನು ಘೋಷಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ. ಅತ್ತ ಟೀಮ್ ಇಂಡಿಯಾ ಕೋಚ್ ರೇಸ್​ನಲ್ಲಿ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಭಾರತ ತಂಡದ ತರಬೇತುದಾರನಾಗಿ ಗೌತಿ ಹೊಸ ಇನಿಂಗ್ಸ್ ಆರಂಭಿಸಿದರೂ ಅಚ್ಚರಿಪಡಬೇಕಿಲ್ಲ.

ಇತ್ತ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ರಾಹುಲ್ ದ್ರಾವಿಡ್ ಅವರಿಗೆ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಏನಾದರು ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ದ್ರಾವಿಡ್​ಗೆ ಗೆಲುವಿನ ಬೀಳ್ಕೊಡುಗೆ:

ಬಾರ್ಬಡೋಸ್​ನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್​ಗಳ ರೋಚಕ ಜಯ ಸಾಧಿಸಿ ವಿಶ್ವಕಪ್ ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (76) ಅಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ಭಾರತ ತಂಡವು 20 ಓವರ್​ಗಳಲ್ಲಿ 176 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಪರಿಣಾಮ ಕೊನೆಯ ಓವರ್​ನಲ್ಲಿ 16 ರನ್​ಗಳು ಬೇಕಿತ್ತು. ಅಂತಿಮ ಓವರ್ ಎಸೆದ ಹಾರ್ದಿಕ್ ಪಾಂಡ್ಯ ಕೇವಲ 8 ರನ್ ನೀಡುವ ಮೂಲಕ ಸೌತ್ ಆಪ್ರಿಕಾ ತಂಡವನ್ನು 169 ರನ್​ಗಳಿಗೆ ನಿಯಂತ್ರಿಸಿದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯ ಸಾಧಿಸಿತು.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿರುವ 2 ಟ್ರೋಫಿ

ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಆಟಗಾರರು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭೂತಪೂರ್ವ ಬೀಳ್ಕೊಡುಗೆ ನೀಡಿದ್ದಾರೆ. ಇದರೊಂದಿಗೆ ದ್ರಾವಿಡ್ ಅವರ ಕೋಚಿಂಗ್ ಕೆರಿಯರ್ ಕೂಡ ಅಂತ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಅವರು ಬಿಸಿಸಿಐ ಜೊತೆ ಕೈ ಜೋಡಿಸಲಿದ್ದಾರಾ ಕಾದು ನೋಡಬೇಕಿದೆ.