ಬಾರ್ಬಡೋಸ್‌ನಲ್ಲಿ ಚಂಡಮಾರುತ: ಕೆರಿಬಿಯನ್ ದ್ವೀಪದಲ್ಲೇ ಉಳಿದ ಟಿಮ್ ಇಂಡಿಯಾ
Team India: ಶನಿವಾರ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ಜಯ ಸಾಧಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತು
ಟಿ20 ವಿಶ್ವಕಪ್ ಮುಗಿದು ಎರಡು ದಿನಗಳು ಕಳೆದಿವೆ. ಇದಾಗ್ಯೂ ಟೀಮ್ ಇಂಡಿಯಾ (Team India) ವಿಶ್ವಕಪ್ ಟ್ರೋಫಿಯೊಂದಿಗೆ ಭಾರತಕ್ಕೆ ಬಂದಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಬಾರ್ಬಡೋಸ್‌ನಲ್ಲಿ ಚಂಡಮಾರುತದೊಂದಿಗೆ ಭೀಕರ ಮಳೆಯಾಗುತ್ತಿರುವುದು. ಹರಿಕೇನ್ ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ನ ಬಹುತೇಕ ವಿಮಾನಯಾನ ಸ್ಥಗಿತಗೊಂಡಿದೆ. ಹೀಗಾಗಿ ಭಾರತ ತಂಡವು ಕೆರಿಬಿಯನ್ ದ್ವೀಪದಲ್ಲೇ ಉಳಿಯಬೇಕಾಗಿ ಬಂದಿದೆ.
ಅತ್ತ ವಿಮಾನಯಾನಗಳು ಸ್ಥಗಿತಗೊಂಡಿರುವುದರಿಂದ ಬಿಸಿಸಿಐ ಇದೀಗ ಚಾರ್ಟಡ್ ಫ್ಲೈಟ್ ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ಭಾರತಕ್ಕೆ ಕರೆತರಲು ಯೋಜನೆ ರೂಪಿಸಿದೆ. ಅದರಂತೆ ಶೀಘ್ರದಲ್ಲೇ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ.
ಜಯ್ ಶಾ ಹೇಳಿದ್ದೇನು?
ಭಾರತೀಯ ಆಟಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಸೋಮವಾರ ಬಾರ್ಬಡೋಸ್‌ನಿಂದ ಚಾರ್ಟಡ್ ಫ್ಲೈಟ್ ಪಡೆಯಲು ಚರ್ಚಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ವಿಮಾನ ನಿಲ್ದಾಣ ಮುಚ್ಚಿದ್ದರಿಂದ, ತಕ್ಷಣವೇ ಚಾರ್ಟಡ್ ಪ್ಲೈಟ್ ಸೇವೆ ಸಿಕ್ಕಿಲ್ಲ. ಈ ಬಗ್ಗೆ ಕೆಲ ಕಂಪನಿಗಳೊಂದಿಗೆ ಮಂಡಳಿಯು ಸಂಪರ್ಕದಲ್ಲಿದೆ. ಅಲ್ಲದೆ ಬಾರ್ಬಡೋಸ್ ವಿಮಾನ ನಿಲ್ದಾಣವು ತೆರೆದ ತಕ್ಷಣವೇ ಭಾರತ ತಂಡವು ಅಮೆರಿಕ ಅಥವಾ ಯುರೋಪ್‌ಗೆ ಹಾರಲಿದೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ.
ಬಾರ್ಬಡೋಸ್ನ ಚಂಡಮಾರುತದ ದೃಶ್ಯ:
Latest visuals of Caribbean after Hurricane Beryl impact and Damaging of HurricaneBeryl did to Barbados! #tornado #storm #rain #wind #hurricane #disaster #severeweather #weather #news #hurricaneseason2024 #hurricaneberyl #beryl #damage #Carribbean #Barbados #USA pic.twitter.com/E4WEEs5cEu
— World War 3 (@Worldwar_3_) July 2, 2024
ಇದಾಗ್ಯೂ ಟೀಮ್ ಇಂಡಿಯಾ ಆಟಗಾರರು ಮಂಗಳವಾರ ಬಾರ್ಬಡೋಸ್ ತೊರೆಯುವುದು ಕಷ್ಟ. ಏಕೆಂದರೆ ಭೀಕರ ಚಂಡಮಾರುತದಿಂದ ಬಾರ್ಬಡೋಸ್ ತತ್ತರಿಸಿದ್ದು, ಅನೇಕ ಕಡೆ ರಸ್ತೆಗಳ ಸಂಪರ್ಕ ಕೂಡ ಕಡಿತವಾಗಿದೆ. ಇದರ ನಡುವೆ ಬಿಸಿಸಿಐ ಬಾರ್ಬಡೋಸ್‌ನಿಂದ ಅಮೆರಿಕಕ್ಕೆ ತೆರಳಲು ಪರ್ಯಾಯ ಮಾರ್ಗಗಳನ್ನು ನೋಡುತ್ತಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿರುವ 2 ಟ್ರೋಫಿ
ಹೀಗಾಗಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ತಕ್ಷಣ ಟೀಮ್ ಇಂಡಿಯಾ ಆಟಗಾರರು ಅಮೆರಿಕ ಅಥವಾ ಯುರೋಪ್‌ಗೆ ತೆರಳಲಿದ್ದಾರೆ. ಆ ಬಳಿಕ ಅಲ್ಲಿಂದ ಭಾರತಕ್ಕೆ ಬರಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಬುಧವಾರ ಅಥವಾ ಗುರುವಾರ ಭಾರತಕ್ಕೆ ಬಂದಿಳಿಯುವ ಸಾಧ್ಯತೆಯಿದೆ.