IPL 2026: ಮುಖ್ಯ ಕೋಚ್ ಹುದ್ದೆಗೆ ಗುಡ್ ಬೈ; ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಿದ್ದ ರಾಹುಲ್ ದ್ರಾವಿಡ್
Rahul Dravid Steps Down as Rajasthan Royals Head Coach: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 2026ರ ಐಪಿಎಲ್‌ಗೂ ಮುನ್ನ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕಳೆದ ವರ್ಷ ತಂಡ ಸೇರಿದ್ದ ದ್ರಾವಿಡ್, ಇದ್ದಕ್ಕಿದ್ದಂತೆ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ರಾಯಲ್ಸ್ ತಂಡವು ದ್ರಾವಿಡ್ ಅವರ ಸೇವೆಗಳಿಗೆ ಧನ್ಯವಾದ ಅರ್ಪಿಸಿದೆ.

2026 ರ ಐಪಿಎಲ್ (IPL 2026) ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಆದಾಗ್ಯೂ ಹಲವು ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಈಗಾಗಲೇ ಟ್ರೇಡಿಂಗ್ ವಿಂಡೋವನ್ನು ಸಹ ತೆರೆಯಲಾಗಿದೆ. ಇದರಡಿಯಲ್ಲಿ ಫ್ರಾಂಚೈಸಿ, ಫ್ರಾಂಚೈಸಿಗಳ ನಡುವೆ ಆಟಗಾರರ ವಿನಮಯ ಮಾಡಿಕೊಳ್ಳಬಹುದಾಗಿದೆ ಅಥವಾ ಆಟಗಾರರನ್ನು ಹಣಕ್ಕೂ ಖರೀದಿಸಬಹುದಾಗಿದೆ. ಇದೆಲ್ಲದರ ನಡುವೆ ಇದೀಗ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸಿಗೆ ಆಘಾತ ಎದುರಾಗಿದೆ. ಕಳೆದ ವರ್ಷವಷ್ಟೇ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಸ್ವತಃ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
View this post on Instagram
ಮೇಲೆ ಹೇಳಿದಂತೆ ರಾಹುಲ್ ದ್ರಾವಿಡ್ ಕಳೆದ ವರ್ಷವಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದರು. 2024 ರ ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು. ಇದಕ್ಕೂ ಮೊದಲು ಅವರು 2011 ರಿಂದ 2013 ರವರೆಗೆ ಆಟಗಾರನಾಗಿ ಈ ತಂಡದ ಭಾಗವಾಗಿದ್ದರು. ಆ ನಂತರ 2015 ರವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದ ದ್ರಾವಿಡ್ ಇದೀಗ ಇದ್ದಕ್ಕಿದ್ದಂತೆ ತಂಡವನ್ನು ತೊರೆದಿದ್ದಾರೆ.
View this post on Instagram
ದೊಡ್ಡ ಹುದ್ದೆಯನ್ನು ದಿಕ್ಕರಿಸಿದ ದ್ರಾವಿಡ್
ದ್ರಾವಿಡ್ ಅವರ ನಿರ್ಧಾರದ ಬಗ್ಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 2026 ರ ಐಪಿಎಲ್‌ಗೂ ಮೊದಲು ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದಾರೆ. ರಾಹುಲ್ ಹಲವು ವರ್ಷಗಳಿಂದ ರಾಯಲ್ಸ್ ತಂಡದ ಪ್ರಯಾಣದ ಕೇಂದ್ರಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ, ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಒಂದು ಗುರುತು ಬಿಟ್ಟಿದೆ. ರಾಹುಲ್ ಅವರಿಗೆ ದೊಡ್ಡ ಹುದ್ದೆಯನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ ದ್ರಾವಿಡ್ ಆ ಜವಾಬ್ದಾರಿಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ’ ಎಂದು ಫ್ರಾಂಚೈಸ್ ಹೇಳಿದೆ. ಅಲ್ಲದೆ ಫ್ರಾಂಚೈಸ್, ದ್ರಾವಿಡ್ ಅವರ ಸೇವೆಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.
ಪರಿಣಾಮಕಾರಿಯಾಗದ ದ್ರಾವಿಡ್
ಕಳೆದ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು 10 ಪಂದ್ಯಗಳಲ್ಲಿ ಸೋತಿದ್ದ ರಾಯಲ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿತ್ತು. ಅಲ್ಲದೆ ದ್ರಾವಿಡ್ ಮತ್ತು ತಂಡದ ನಾಯಕ ಸಂಜು ಸ್ಯಾಮ್ಸನ್ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದಾಗ್ಯೂ, ಇಬ್ಬರೂ ಈ ವರದಿಗಳನ್ನು ನಿರಾಕರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sat, 30 August 25
