Samit Dravid: ಜೂನಿಯರ್ ದ್ರಾವಿಡ್ ಭರ್ಜರಿ ಸಿಕ್ಸ್: ವಿಡಿಯೋ ನೋಡಿ
Samit Dravid: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್ನಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಮಿತ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ ಖರೀದಿಸಿತ್ತು. ಆಲ್ರೌಂಡರ್ ಆಗಿರುವ 18 ವರ್ಷದ ಸಮಿತ್ ದ್ರಾವಿಡ್ ಈ ಹಿಂದೆ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಟಿ20 ಲೀಗ್ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಟೀಮ್ ಇಂಡಿಯಾದ ದಂತಕಥೆ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್ನಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿಯುತ್ತಿರುವ ಸಮಿತ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಇದಾಗ್ಯೂ ಕೆಲ ಭರ್ಜರಿ ಶಾಟ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಸಮಿತ್ ದ್ರಾವಿಡ್ ಕೇವಲ 7 ರನ್ ಮಾತ್ರ ಗಳಿಸಿದ್ದರು. ಈ ಏಳು ರನ್ಗಳಲ್ಲಿ ಒಂದು ಭರ್ಜರಿ ಸಿಕ್ಸ್ ಒಳಗೊಂಡಿತ್ತು ಎಂಬುದು ವಿಶೇಷ.
ಬೆಂಗಳೂರು ಬ್ಲಾಸ್ಟರ್ಸ್ ವೇಗಿ ನವೀನ್ ಎಸೆದ 7ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸಮಿತ್ ದ್ರಾವಿಡ್ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಅತ್ಯಾಕರ್ಷಕವಾಗಿದ್ದ ಈ ಸಿಕ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಸಮಿತ್ ಅವರ ಆಕ್ರಮಣಕಾರಿ ಆಟದ ಅಪ್ರೋಚ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು 18 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡವು 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಯುವ ದಾಂಡಿಗ ಭುವನ್ ರಾಜು ಕೇವಲ 24 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್ ಒಳಗೊಂಡಂತೆ 51 ರನ್ ಚಚ್ಚಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 17.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಜಯ ಸಾಧಿಸಿದೆ.