Raj Angad Bawa: ಅಂಡರ್ 19 ವಿಶ್ವಕಪ್ ಹೀರೋ ರಾಜ್ ಬಾವಾರನ್ನು ಕ್ರಿಕೆಟ್ ಲೋಕಕ್ಕೆ ಕಾಲಿರಿಸಿದ್ದು ಆ ಒಂದು ಘಟನೆ: ಇದಕ್ಕೆ ಕಾರಣ ಯುವರಾಜ್ ಸಿಂಗ್

| Updated By: Vinay Bhat

Updated on: Feb 06, 2022 | 2:36 PM

India Under-19 Team: ರಾಜ್ ಬಾವಾ ಅವರ ಕ್ರಿಕೆಟ್ ವೃತ್ತಿ ಜೀವನ ಈಗಷ್ಟೆ ಜಿಗುರೊಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವರ ಪ್ರತಿಭೆಗೆ ತಕ್ಕಂತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಎಲ್ಲರ ಆಶಯ.

Raj Angad Bawa: ಅಂಡರ್ 19 ವಿಶ್ವಕಪ್ ಹೀರೋ ರಾಜ್ ಬಾವಾರನ್ನು ಕ್ರಿಕೆಟ್ ಲೋಕಕ್ಕೆ ಕಾಲಿರಿಸಿದ್ದು ಆ ಒಂದು ಘಟನೆ: ಇದಕ್ಕೆ ಕಾರಣ ಯುವರಾಜ್ ಸಿಂಗ್
Yuvraj Singh and Raj Bawa
Follow us on

ರಾಜ್ ಅಂಗದ್ ಬಾವಾ (Raj Angad Bawa) – ಇಂದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದು ರಾರಾಜಿಸುತ್ತಿರುವ ಹೆಸರು. ಕೆರಿಬಿಯನ್ನರ್ ನಾಡಿನಲ್ಲಿ ಶನಿವಾರ ಮುಕ್ತಾಯಗೊಂಡ ಐಸಿಸಿ ಅಂಡರ್ – 19 ವಿಶ್ವಕಪ್ (ICC Under 19 World Cup) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (England vs India) ವಿರುದ್ಧ ಬೆಂಕಿಯ ಚೆಂಡು ಉಗುಳಿದ ಬೌಲರ್. 9.5 ಓವರ್​ನಲ್ಲಿ 1 ಮೇಡರ್ ಜೊತೆಗೆ 31 ರನ್ ನೀಡಿ 5 ವಿಕೆಟ್ ಕಿತ್ತರು. ಇದರೊಂದಿಗೆ ವಿಶೇಷ ದಾಖಲೆಯನ್ನೂ ಬರೆದರು. ಐಸಿಸಿ ಟೂರ್ನಿಗಳ ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಿತ್ತ ಮೊದಲ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ರಾಜ್ ಬಾವಾ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರ ದಾಖಲೆ ಸರಿಗಟ್ಟಿದರು. ಇಂದು ರಾಜ್ ಎಂಬ ಹೆಸರು ಇಷ್ಟರ ಮಟ್ಟಿಗೆ ಮೆರೆಯುತ್ತಿದೆ ಎಂದರೆ ಅದಕ್ಕೆ ಕಾರಣ ಇವರ ಪರಿಶ್ರಮವೇ. ಅಷ್ಟಕ್ಕೂ ಇವರು ಕ್ರಿಕೆಟ್ ಲೋಕಕ್ಕೆ ಕಾಲಿಡುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ.

ಹೌದು, ರಾಜ್ ಬಾವಾ ಅವರಿಗೆ 11, 12 ವರ್ಷ ಆಗುವ ವರೆಗೆ ಕ್ರಿಕೆಟರ್ ಆಗಬೇಕೆಂಬ ಆಸೆಯೇ ಇರಲಿಲ್ಲವಂತೆ. ಅವರು ಹಾಡುಗಳನ್ನು ಕೇಳುವುದು, ನೃತ್ಯದಲ್ಲಿ ಸಾಕಷ್ಟು ಆಸಕ್ತಿಹೊಂದಿದ್ದರಂತೆ. ನಿಮಗಿಲ್ಲಿ ತಿಳಿದಿರಬೇಕಾದ ಸಂಗತಿ ಎಂದರೆ ರಾಜ್ ಬಾವಾ ಕ್ರೀಡಾ ಕುಟುಂಬದಿಂದ ಬಂದವರು. 1948 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸದಸ್ಯ ತರ್ಲೋಚನ್ ಸಿಂಗ್ ಬಾವಾ ಅವರ ಮೊಮ್ಮಗ ರಾಜ್. ವಾಸ್ತವವಾಗಿ ತರ್ಲೋಚನ್ ಕೂಡ 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಪ್ರಮುಖ ಕಾಣಿಕೆ ನೀಡಿದ್ದರು. ಆಗ ಅವರು ಎರಡು ಗೋಲುಗಳನ್ನು ಗಳಿಸಿದ್ದರು. ಅವುಗಳಲ್ಲಿ ಒಂದು ಗೋಲು  ಆತಿಥೇಯ ಗ್ರೇಟ್ ಬ್ರಿಟನ್ ವಿರುದ್ಧ ಫೈನಲ್‌ನಲ್ಲಿ ದಾಖಲಿಸಿದ್ದರು.

ಇವರ ಅಜ್ಜ ಮಾತ್ರವಲ್ಲದೆ ರಾಜ್ ತಂದೆ ಸುಖ್ವಿಂದರ್ ಸಿಂಗ್ ಬಾವಾ ಅವರಿಗೆ ಕ್ರಿಕೆಟ್ ವಲಯ ತುಂಬಾ ಹತ್ತಿರವಾದದ್ದು. ಸುಖ್ವಿಂದರ್ ಸಿಂಗ್ ಅವರು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರ ಬಾಲ್ಯದ ತರಬೇತುದಾರರಾಗಿದ್ದರು. ರಾಜ್ ಬಾವಾ ಅವರಿಗೆ ಕ್ರಿಕೆಟ್ ಆಸೆ ಮೊಳಕೆ ಒಡೆದಿದ್ದು ಇಲ್ಲಿಯೇ. ಈ ಬಗ್ಗೆ ಅವರ ತಂದಯೇ ವಿವರಿಸಿದ್ದಾರೆ. “ಒಂದು ಬಾರಿ ಕ್ರಿಕೆಟ್ ಪಂದ್ಯಾಟದ ಪ್ರವಾಸದ ವೇಳೆ ದರ್ಮಶಾಲಕ್ಕೆ ನನ್ನ ಜೊತೆ ರಾಜ್ ಕೂಡ ಬಂದಿದ್ದ. ಅಲ್ಲಿ ಕ್ರಿಕೆಟ್ ಕುರಿತ ಚರ್ಚೆಯ ಸಭೆಯಲ್ಲಿ ನನ್ನ ಜೊತೆ ಕುಳಿತು ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ, ಅಲ್ಲಿಂದ ಅವರಿಗೆ ಕ್ರಿಕೆಟ್ ಬಗ್ಗೆ ಅರಿವು ಮೂಡಿತು. ಆ ಬಳಿಕ ಗಂಭೀರವಾಗಿ ಕ್ರಿಕೆಟ್ ಆಡಲು ಶುರು ಮಾಡಿದ. ಅವನು ಕ್ಲಾಸ್​ನಲ್ಲಿ ಟಾಪರ್ ಆಗಿದ್ದ, 9ನೇ ತರಗತಿ ವರೆಗೆ ಎರಡನೇ ಸ್ಥಾನ ಬರುತ್ತಿದ್ದ,” ಎಂದು ಹೇಳಿದರು.

ತನ್ನ ಪಯಣದ ಆರಂಭದ ಬಗ್ಗೆ ಸ್ವತಃ ರಾಜ್ ಅವರೇ ಮಾತನಾಡಿದ್ದಾರೆ. “ನನ್ನ ತಂದೆ ಯುವರಾಜ್ ಸಿಂಗ್ ಅವರಿಗೆ ತರಬೇತಿ ನೀಡುತ್ತಿದ್ದರು. ಚಿಕ್ಕವನಿರುವಾಗ ನಾನು ಇದನ್ನ ಗಮನಿಸುತ್ತಿದ್ದೆ, ಯುವರಾಜ್ ರೀತಿಯಲ್ಲೇ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದೆ. ಅವರ ಬ್ಯಾಟಿಂಗ್ ವಿಡಿಯೋವನ್ನು ತುಂಬಾ ನೋಡುತ್ತಿದ್ದೆ. ಅವರೇ ನನ್ನ ರೋಲ್ ಮಾಡಲ್,” ಎಂದರು ರಾಜ್. ವಿಶೇಷ ಎಂದರೆ ಯುವರಾಜ್ ಅವರ ಜೆರ್ಸಿ ನಂಬರ್ 12 ಅನ್ನೇ ರಾಜ್ ಕೂಡ ತನ್ನ ಜೆರ್ಸಿ ನಂಬರ್ ಆಗಿ ಆಯ್ಕೆ ಮಾಡಿದ್ದಾರೆ.

ಮೂಲತಃ ರಾಜ್ ಅವರು ಬಲಗೈ ಆಟಗಾರ. ಆದರೆ, ಯುವರಾಜ್ ಲೆಫ್ಟ್​ ಹ್ಯಾಂಡ್ ಆಗಿದ್ದರಿಂದ ಇವರು ಕೂಡ ಎಡಗೈ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬೌಲಿಂಗ್, ಫೀಲ್ಡಿಂಗ್, ಬಾಲ್ ಎಸೆಯಲು ಬಲಗೈ ಉಪಯೋಗಿಸುತ್ತಾರಂತೆ. “ನಾನು ಅವನನ್ನು ರೈಂಟ್ ಹ್ಯಾಂಡ್ ಬ್ಯಾಟರ್ ಮಾಡಲು ತುಂಬಾ ಪ್ರಯತ್ನಿಸಿದೆ. ಆದರೆ, ನನಗೆ ಸಾಧ್ಯ ಆಗಲಿಲ್ಲ,” ಎನ್ನುತ್ತಾರೆ ರಾಜ್ ಅವರ ತಂದೆ.

ಕೆಲವು ವರ್ಷಗಳ ಹಿಂದೆ ರಾಜ್ ಅವರ ಕುಟುಂಬವು ಗುರುಗ್ರಾಮ್‌ನಿಂದ ಚಂಡೀಗಢಕ್ಕೆ ಸ್ಥಳಾಂತರಗೊಂಡಿತು ಮತ್ತು ರಾಜ್ ಡಿಎವಿ ಪಬ್ಲಿಕ್ ಶಾಲೆಗೆ ಸೇರಿದರು. ಇಲ್ಲಿಂದ ನಿರಂತರವಾಗಿ ವಯೋಮಿತಿಯಲ್ಲಿ ಆಡತೊಡಗಿದರು. ಕೆಲವು ವರ್ಷಗಳ ಹಿಂದೆ ಚಂಡೀಗಢ ಬಿಸಿಸಿಐನಿಂದ ಮಾನ್ಯತೆ ಪಡೆದಾಗ, ನಾನು ಪಿಸಿಎಯಿಂದ ಯುಟಿಸಿಎಗೆ ಸ್ಥಳಾಂತರಗೊಂಡೆ. ಅಂದಿನಿಂದ ತಂಡದೊಂದಿಗೆ ಆಡುತ್ತಿದ್ದೇನೆ ಎಂದರು ರಾಜ್. ಒಟ್ಟಾರೆ ರಾಜ್ ಬಾವಾ ಅವರ ಕ್ರಿಕೆಟ್ ವೃತ್ತಿ ಜೀವನ ಈಗಷ್ಟೆ ಜಿಗುರೊಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವರ ಪ್ರತಿಭೆಗೆ ತಕ್ಕಂತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಎಲ್ಲರ ಆಶಯ.

Raj Bawa: ಬ್ರಿಟಿಷರನ್ನು ಅಟ್ಟಾಡಿಸಿದ ರಾಜ: ಇದುವರೆಗೆ ಯಾವುದೇ ಭಾರತೀಯ ಪ್ಲೇಯರ್ ಮಾಡಿಲ್ಲ ಈ ದಾಖಲೆ

IND vs WI: ಭಾರತದ 1000ನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಸ್ಟಾರ್ ಆಟಗಾರರು