ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ (india vs west indies 1st odi) ಪಂದ್ಯದ ಮೂಲಕ ದೀಪಕ್ ಹೂಡಾ ಪಾದಾರ್ಪಣೆ ಮಾಡಿದ್ದಾರೆ . ವಿರಾಟ್ ಕೊಹ್ಲಿ ಅವರಿಗೆ ಟೀಮ್ ಇಂಡಿಯಾದ ಏಕದಿನ ಕ್ಯಾಪ್ ನೀಡುವ ತಂಡಕ್ಕೆ ಪ್ಲೇಯಿಂಗ್ 11 ಗೆ ಬರಮಾಡಿಕೊಂಡರು. ದೀಪಕ್ ಹೂಡಾ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಆಟ ಪ್ರದರ್ಶಿಸಿದ್ದಾರೆ. ಆದರೆ, ಕಳೆದ ಒಂದು ವರ್ಷದಲ್ಲಿ ಅವರೂ ಹಲವು ಏರಿಳಿತಗಳನ್ನು ಕಂಡಿದ್ದಾರೆ. 2021 ರಲ್ಲಿ, ಕೃನಾಲ್ ಪಾಂಡ್ಯ ಅವರೊಂದಿಗಿನ ವಿವಾದದ ನಂತರ ಬರೋಡಾ ಕ್ರಿಕೆಟ್ ಸಂಸ್ಥೆ ಅವರನ್ನು ಅಮಾನತುಗೊಳಿಸಿತ್ತು. ಇದಾದ ಬಳಿಕ ಬರೋಡಾ ಕ್ರಿಕೆಟ್ ತಂಡವನ್ನು ತೊರೆದಿದ್ದ ದೀಪಕ್ ಹೂಡಾ ರಾಜಸ್ಥಾನ ಪರ ಆಡುತ್ತಿದ್ದಾರೆ. ರಾಜಸ್ಥಾನ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಹೂಡಾ ಇದೀಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ದೀಪಕ್ ಹೂಡಾ ಮೂಲತಃ ಹರಿಯಾಣದವರು. ಆದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಬರೋಡಾ ಪರ ಆಡುತ್ತಿದ್ದರು. ಅವರ ತಂದೆ ವಾಯುಪಡೆಯಲ್ಲಿದ್ದ ಕಾರಣದಿಂದಾಗಿ ಬಾಲ್ಯವು ದೇಶದ ವಿವಿಧ ನಗರಗಳಲ್ಲಿ ಕಳೆದಿದ್ದರು. ಈ ಕಾರಣಕ್ಕಾಗಿ, ಅವರು ಬರೋಡಾದ ಕಡೆಯಿಂದ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅದರಂತೆ ಭಾರತದ ಅಂಡರ್ 19 ತಂಡದಲ್ಲಿ ಮಿಂಚಿದ್ದ ಹೂಡಾ 2014 ರಲ್ಲಿ ನಡೆದ ಕಿರಿಯರ ವಿಶ್ವಕಪ್‌ನ ಭಾಗವಾಗಿದ್ದರು.
ಬದಲಾದ ಹೂಡಾ ಅದೃಷ್ಟ:
ದೀಪಕ್ ಹೂಡಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆರು ಪಂದ್ಯಗಳಲ್ಲಿ 73.50 ಸರಾಸರಿಯಲ್ಲಿ 294 ರನ್ ಬಾರಿಸುವ ಮೂಲಕ ಮಿಂಚಿದ್ದರು. ಈ ವೇಳೆ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ರಾಜಸ್ಥಾನ ಪರ ಆಡಿದ ಚೊಚ್ಚಲ ಟೂರ್ನಿಯಲ್ಲೇ ಹೂಡಾ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಭಾಗವಾಗಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಪಂಜಾಬ್ ಪರ ಆಡಿದ್ದ ಹೂಡಾ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು.
ದೀಪಕ್ ಅವರ ವೃತ್ತಿಜೀವನ:
26 ವರ್ಷದ ದೀಪಕ್ ಹೂಡಾ ಇದುವರೆಗೆ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 42.76 ಸರಾಸರಿಯಲ್ಲಿ 2908 ರನ್ ಗಳಿಸಿದ್ದಾರೆ. ಈ ವೇಳೆ 9 ಶತಕ ಮತ್ತು 15 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 74 ಲಿಸ್ಟ್ ಎ ಪಂದ್ಯಗಳಲ್ಲಿ ಅವರು 38.25 ಸರಾಸರಿಯಲ್ಲಿ 2257 ರನ್ ಗಳಿಸಿದ್ದಾರೆ. ಇದೇ ವೇಳೆ ನಾಲ್ಕು ಶತಕ ಮತ್ತು 12 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು 141 ಟಿ20 ಪಂದ್ಯಗಳನ್ನು ಆಡಿರುವ ದೀಪಕ್ 2172 ರನ್ ಗಳಿಸಿದ್ದಾರೆ. ಹಾಗೆಯೇ ತಾತ್ಕಾಲಿಕ ಬೌಲರ್ ಆಗಿ ಕೂಡ ಗುರುತಿಸಿಕೊಂಡಿರುವ ಹೂಡಾ ಒಟ್ಟು 72 ವಿಕೆಟ್ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(Deepak Hooda ODI debut india vs west indies 1st odi Ahmedabad)