
ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ (SRH vs RR) ನಡುವೆ ನಡೆಯಿತು. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬೀಳುವುದರಿಂದ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದವು. ಆದಾಗ್ಯೂ 15 ವರ್ಷದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 47 ರನ್ಗಳಿಂದ ಸೋತು ಫೈನಲ್ ರೇಸ್ನಿಂದ ಹೊರಬಿದ್ದಿತು. ಇತ್ತ ಸನ್‌ರೈಸರ್ಸ್ ವಿರುದ್ಧ ಗೆದ್ದ ರಾಜಸ್ಥಾನ್, ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 244 ರನ್‌ಗಳ ಬೃಹತ್ ಗುರಿ ದಾಖಲಿಸಿತು. ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದ ಹೀನಾಯವಾಗಿ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸುತ್ತಾರೆ ಎಂದು ತೋರುತ್ತಿತ್ತು. ಆದರೆ ಶತಕದಂಚಿನಲ್ಲಿ ಎಡವಿದ ವೈಭವ್ 97 ರನ್‌ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ವೈಭವ್ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಧ್ರುವ್ ಜುರೆಲ್ ಕೇವಲ 21 ಎಸೆತಗಳಲ್ಲಿ 50 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು.
ನಾಯಕ ರಿಯಾನ್ ಪರಾಗ್ ಕೂಡ 12 ಎಸೆತಗಳಲ್ಲಿ 2 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳೊಂದಿಗೆ 26 ರನ್ ಗಳಿಸಿದರು. ಈ ಅತ್ಯುತ್ತಮ ಇನ್ನಿಂಗ್ಸ್‌ಗಳ ಹೊರತಾಗಿಯೂ, ರಾಜಸ್ಥಾನ್ 20 ಓವರ್‌ಗಳಲ್ಲಿ 243 ರನ್‌ಗಳಿಸಲಷ್ಟೇ ಶಕ್ತವಾಯಿತು. ಇತ್ತ ಸನ್‌ರೈಸರ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದರೆ, ನಿತೀಶ್ ಹಾಗೂ ಶಿವಾಂಗ್ ತಲಾ 1 ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಆಸೆಗೆ ಜೋಫ್ರಾ ಆರ್ಚರ್ ಮೊದಲ ಓವರ್ನಲ್ಲೇ ಬ್ರೇಕ್ ಹಾಕಿದರು. ಆರ್ಚರ್ ಮೊದಲ ಓವರ್ನಲ್ಲೇ ಅಭಿಷೇಕ್ ಶರ್ಮಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆ ಬಳಿಕ ಬಂದ ಇಶಾನ್ ಕಿಶನ್ 3 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ ಹೈದರಾಬಾದ್ ತಂಡದ ಇನ್ನಿಂಗ್ಸ್ಗೆ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ಆರ್ಚರ್, ಅವರನ್ನೂ ಕೂಡ 33 ರನ್‌ಗಳಿಗೆ ಔಟ್ ಮಾಡಿದರು. ಆ ನಂತರ ಆರ್ಚರ್, ಟ್ರಾವಿಸ್ ಹೆಡ್ ಅವರನ್ನು ಬಲಿಪಡೆದರು.
ಆ ಬಳಿಕ ದಾಳಿಗಿಳಿದ ನಾಂಡ್ರೆ ಬರ್ಗರ್, ಸ್ಮರಣ್ ರವಿಚಂದ್ರನ್ ಅವರ ವಿಕೆಟ್ ಪಡೆದರೆ, ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಯಶ್ ರಾಜ್ ಪುಂಜಾ ರಾಜಸ್ಥಾನದ ಗೆಲುವನ್ನು ಖಚಿತಪಡಿಸಿದರು. ಮಧ್ಯಮ ಕ್ರಮಾಂಕದಲ್ಲಿ, ನಿತೀಶ್ ಕುಮಾರ್ ರೆಡ್ಡಿ ಮತ್ತು ಸಲೀಲ್ ಅರೋರಾ ಕೆಲವು ಉತ್ತಮ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು, ಆದರೆ ರವೀಂದ್ರ ಜಡೇಜಾ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಹೈದರಾಬಾದ್ ತಂಡದ ಭರವಸೆಯನ್ನು ಹುಸಿಗೊಳಿಸಿದರು.
Published On - 11:24 pm, Wed, 27 May 26