ಮುಂದಿನ ವರ್ಷ ಅಂದರೆ, 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಹೋಗುವುದಿಲ್ಲ ಎಂಬ ಸುದ್ದಿಯನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಬಿಸಿಸಿಐ ಅಥವಾ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳುವ ಮೂಲಕ ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಕೆರಳುವಂತೆ ಮಾಡಿದ್ದಾರೆ. ವಾಸ್ತವವಾಗಿ ಕೆಲವು ದಿನಗಳಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಪೋಹಗಳು ಎದ್ದಿದ್ದವು. ಇದೀಗ ಆ ಊಹಪೋಹಗಳನ್ನು ರಾಜೀವ್ ಶುಕ್ಲಾ ಅಲ್ಲಗಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜೀವ್ ಶುಕ್ಲಾ, ‘ಮುಂದಿನ ವರ್ಷ ಫೆಬ್ರವರಿಯಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ. ಅಲ್ಲದೆ, ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿ ಬಳಿ ಕೇಳಿಕೊಂಡಿದೆ ಎಂದು ವರದಿಗಳಾಗುತ್ತಿವೆ. ಆದರೆ ಯಾವ ಮೂಲವು ಈ ಮಾಹಿತಿಯನ್ನು ನೀಡಿದೆ ಎಂದು ನನಗೆ ತಿಳಿದಿಲ್ಲ. ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ’ ಎಂದು ಹೇಳುವ ಮೂಲಕ ರಾಜೀವ್ ಶುಕ್ಲಾ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಟೀಂ ಇಂಡಿಯಾ 2008ರಲ್ಲಿ ಏಷ್ಯಾಕಪ್ ಆಡಲು ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಆ ಆವೃತ್ತಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆದಿತ್ತು. ಆದರೆ ಧೋನಿ ನೇತೃತ್ವದ ತಂಡ ಫೈನಲ್‌ನಲ್ಲಿ ಸೋತಿತ್ತು. ಈ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಭಾರತ ಎರಡು ಬಾರಿ ಮುಖಾಮುಖಿಯಾಗಿದ್ದವು. ಒಮ್ಮೆ ಗ್ರೂಪ್ ಹಂತದಲ್ಲಿ ಮತ್ತು ಎರಡನೇ ಬಾರಿ ಸೂಪರ್ ಫೋರ್ ಸುತ್ತಿನಲ್ಲಿ. ಇದರಲ್ಲಿ ಒಂದು ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿದ್ದರೆ, ಇನ್ನೊಂದು ಪಂದ್ಯವನ್ನು ಪಾಕಿಸ್ತಾನ ಗೆದ್ದಿತ್ತು.
ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಹೋಗಲು ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಈ ಪಂದ್ಯಾವಳಿಯನ್ನು ‘ಹೈಬ್ರಿಡ್ ಮಾದರಿ’ಯಲ್ಲಿ ನಡೆಸಲಾಯಿತು. ಅಂದರೆ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಭಾರತ ಕೊಲಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ