U19 World cup: ಕೊನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಅಂಡರ್19 ವಿಶ್ವಕಪ್​ನಲ್ಲಿ ರಾಜ್​ವರ್ಧನ್ ಸ್ಫೋಟಕ ಆಟ

| Updated By: Vinay Bhat

Updated on: Jan 20, 2022 | 11:56 AM

India U19 vs Ireland U19: ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತನ್ನ ಜಯದ ನಾಗಾಲೋಟವನ್ನು ಮುಂದುವರೆಸಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಕಿರಿಯರು 174 ರನ್​ಗಳ ಅಮೋಘ ಗೆಲುವು ಸಾಧಿಸಿದರು. ಅದರಲ್ಲೂ ಕೊನೇ ಓವರ್​ನಲ್ಲಿ ರಾಜವರ್ಧನ್ ಹಂಗರ್​ಗೇಕರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

U19 World cup: ಕೊನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಅಂಡರ್19 ವಿಶ್ವಕಪ್​ನಲ್ಲಿ ರಾಜ್​ವರ್ಧನ್ ಸ್ಫೋಟಕ ಆಟ
Rajvardhan Hangargekar IND U19 vs IRE U19
Follow us on

ವೆಸ್ಟ್​ ಇಂಡೀಸ್​ನಲ್ಲಿ ಸಾಗುತ್ತಿರುವ ಐಸಿಸಿ ಅಂಡರ್-19 2022 ವಿಶ್ವಕಪ್​ನಲ್ಲಿ (ICC Under 19 World Cup 2022 ) ಭಾರತ ತಂಡ ತನ್ನ ಜಯದ ನಾಗಾಲೋಟವನ್ನು ಮುಂದುವರೆಸಿದೆ. ಐರ್ಲೆಂಡ್ (India U19 vs Ireland U19) ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಭಾರತದ ಕಿರಿಯರು ಬರೋಬ್ಬರಿ 174 ರನ್​ಗಳ ಅಮೋಘ ಗೆಲುವು ಸಾಧಿಸಿದರು. ಪಂದ್ಯ ಆರಂಭಕ್ಕೂ ಮುನ್ನ ತಂಡದ ನಾಯಕ ಯಶ್ ಧುಲ್ ಸೇರಿ 6 ಆಟಗಾರರಿಗೆ ಕೊರೊನಾ ಪಾಸಿಟಿವ್ ಕಂಡುಬಂತು. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ಅಂಡರ್-19 ತಂಡ ಅಮೋಘ ಪ್ರದರ್ಶನ ನೀಡಿ ಆಡಿದ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾವನ್ನು ಭದ್ರಪಡಿಸಿಕೊಂಡಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ಭಾರತದ ಬ್ಯಾಟಿಂಗ್. ಅದರಲ್ಲೂ ಕೊನೇ ಓವರ್​ನಲ್ಲಿ ರಾಜವರ್ಧನ್ ಹಂಗರ್​ಗೇಕರ್ (Rajvardhan Hangargekar) ಸ್ಫೋಟಕ ಬ್ಯಾಟಿಂಗ್ ನಡೆಸಿ, ಸತತ ಮೂರು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಿಂದಲೇ ಬಿರುಸಿನ ಆಟವಾಡಿತು. ಓಪನರ್​ಗಳಾದ ರಘುವಂಶಿ ಹಾಗೂ ಹರ್ನೂರ್ ಸಿಂಗ್ ಮೊದಲ ವಿಕೆಟ್​ಗೆನೇ 164 ರನ್​ಗಳ ಜೊತೆಯಾಟ ಆಡಿದರು. ಇಬ್ಬರೂ ಅರ್ಧಶತಕ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ರಘು 79 ಎಸೆತಗಳಲ್ಲಿ 79 ರನ್ ಬಾರಿಸಿದರೆ, ಹರ್ನೂರ್ 101 ಎಸೆತಗಳಲ್ಲಿ 88 ರನ್ ಸಿಡಿಸಿದರು. ರಾಜ್ ಬವ 42 ರನ್ ಬಾರಿಸಿದರೆ, ನಾಯಕನ ಪಟ್ಟ ತೊಟ್ಟ ನಿಶಾಂತ್ ಸಿಂಧೂ 36 ರನ್ ಕೊಡುಗೆ ನೀಡಿದರು.

ಕೊನೇ ಹಂತದಲ್ಲಿ ನಡೆದಿದ್ದು ರಾಜ್​ವರ್ಧನ್ ಆಟ. ಮನಬಂದಂತೆ ಬ್ಯಾಟ್ ಬೀಸಿದ ಇವರು ಐರ್ಲೆಂಡ್ ಬೌಲರ್​ಗಳ ಬೆವರಿಳಿಸಿದರು. ಕೇವಲ 17 ಎಸೆತಗಳಲ್ಲಿ 1 ಬೌಂಡರಿ ಮತ್ತು ಬರೋಬ್ಬರಿ 5 ಅಮೋಘ ಸಿಕ್ಸರ್ ಸಿಡಿಸಿ ಅಜೇಯ 39 ರನ್ ಚಚ್ಚಿದರು. ಅದರಲ್ಲೂ ಕೊನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ದು ಮಾತ್ರ ಮನಮೋಹಕವಾಗಿತ್ತು. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಭಾರತ ಅಂಡರ್- 19 ತಂಡ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿತು.

 

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 66 ರನ್ ಆಗುವ ಹೊತ್ತಿಗೆನೇ ತನ್ನ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ವಿಶೇಷ ಎಂದರೆ ಭಾರತ ಪರ ಬರೋಬ್ಬರಿ 8 ಆಟಗಾರರು ಬೌಲಿಂಗ್ ಮಾಡಿದರು. ಐರ್ಲೆಂಡ್ ಪರ 32 ರನ್ ಗಳಿಸಿದ ಸ್ಕಾಟ್ ಮೆಕ್ ಬೆತ್ ಹೆಚ್ಚಿನ ರನ್ ಗಳಿಸಿದವರು. ಭಾರತದ ಬೌಲಿಂಗ್ ದಾಳಿಗೆ ನಲುಗಿದ ಐರ್ಲೆಂಡ್ ತಂಡ ಕೇವಲ 133 ರನ್​ಗೆ ಆಲೌಟಾಯಿತು. ಭಾರತದ ಪರ ಗರ್ವ್ ಸಂಗ್ವಾನ್, ಅನೀಶ್ ಗೌತಮ್, ಕೌಶಲ್ ತಾಂಬೆ ತಲಾ ಎರಡು ವಿಕೆಟ್ ಪಡೆದರು.

174 ರನ್​ಗಳ ಭರ್ಜರಿ ಜಯದೊಂದಿಗೆ ಭಾರತ ತಂಡ ಅಂಡರ್ – 19 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜನವರಿ 22 ರಂದು ಉಗಾಂಡ ವಿರುದ್ಧ ಆಡಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಶುರುವಾಗಲಿದೆ.

South Africa vs India: ನಾನೀಗ ನಾಯಕನಲ್ಲ, ನಿನ್ನ ಮಿತಿಯಲ್ಲಿರು: ಆಫ್ರಿಕಾ ನಾಯಕನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ

KL Rahul: ಪಂದ್ಯದ ಬಳಿಕ ಭಾರತದ ಸೋಲಿಗೆ ಕೆಎಲ್ ರಾಹುಲ್ ನೀಡಿದ ಕಾರಣ ಏನು ಗೊತ್ತೇ?