KL Rahul: ಪಂದ್ಯದ ಬಳಿಕ ಭಾರತದ ಸೋಲಿಗೆ ಕೆಎಲ್ ರಾಹುಲ್ ನೀಡಿದ ಕಾರಣ ಏನು ಗೊತ್ತೇ?
South Africa vs India: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಸೋಲಿಗೆ ನಾಯಕ ಕೆಎಲ್ ರಾಹುಲ್ ವಿವರಣೆ ನೀಡಿದ್ದು, ಅವರು ಏನು ಹೇಳಿದರು ಎಂಬುದನ್ನು ನೋಡೋಣ.
ವಿರಾಟ್ ಕೊಹ್ಲಿ (Virat Kohli) ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ತಂಡ ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಸೋಲುಂಡ ಭಾರತ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ವಿಫಲವಾಗಿದೆ. ತೆಂಬಾ ಬವೂಮ (110) ಹಾಗೂ ರಸಿ ವಾನ್ ಡರ್ ಡುಸೆನ್ (129*) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ 31 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಪಡೆದುಕೊಂಡಿದ್ದಾರೆ. ಭಾರತೀಯ ಬೌಲರ್‌ಗಳು ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾದರು. ತೆಂಬಾ ಹಾಗೂ ಡುಸೆನ್ ವಿಕೆಟ್ ಕೀಳಲು ಸಾಧ್ಯವಾಗದೆ ಹೆಚ್ಚು ರನ್ ಹರಿಬಿಟ್ಟರು. ಬ್ಯಾಟಿಂಗ್ನಲ್ಲೂ ಭಾರತ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕದ ಅನುಭವಿ ಆಟಗಾರರೇ ಕೈಕೊಟ್ಟರು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ (Team India) ಸೋಲಿಗೆ ನಾಯಕ ಕೆಎಲ್ ರಾಹುಲ್ (KL Rahul) ವಿವರಣೆ ನೀಡಿದ್ದು, ಅವರು ಏನು ಹೇಳಿದರು ಎಂಬುದನ್ನು ನೋಡೋಣ.
“ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಇದರಿಂದ ಸಾಕಷ್ಟು ಕಲಿತಿದ್ದೇವೆ. ನಾವು ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡೆವು. ಆದರೆ, ಮಧ್ಯಮ ಓವರ್ನಲ್ಲಿ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಮಧ್ಯಮದಲ್ಲಿ ವಿಕೆಟ್ ಪಡೆಯುವುದು ಹೇಗೆ, ಎದುರಾಳಿಯನ್ನು ಕಟ್ಟಿ ಹಾಕುವುದು ಹೇಗೆ ಎಂಬ ಬಗ್ಗೆ ನಾವು ಯೋಚಿಸುತ್ತಿದ್ದೆವು. ಪಂದ್ಯದ ಮೊದಲ 20-25 ಓವರ್ವರೆಗೂ ನಾವು ಸಮಾನವಾಗಿದ್ದೆವು. ನಾವು ಈ ಟಾರ್ಗೆಟ್ ಅನ್ನು ಸುಲಭವಾಗಿ ಗುರಿ ಮುಟ್ಟಬಹುದು ಎಂದು ನಂಬಿದ್ದೆವು. ಆದರೆ, ಆಫ್ರಿಕಾ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ನಮ್ಮ ಪ್ರಮುಖ ವಿಕೆಟ್ಗಳನ್ನೇ ಕಿತ್ತರು. 20 ಓವರ್ ಬಳಿಕ ನಾನು ಬ್ಯಾಟ್ ಮಾಡಲಿಲ್ಲ. ಹೀಗಾಗಿ ಈ ಪಿಚ್ ಬದಲಾಗಿದೆಯಾ ಎಂಬ ಬಗ್ಗೆ ತಿಳಿದಿಲ್ಲ,” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, “ಈ ಪಿಚ್ ಬ್ಯಾಟಿಂಗ್ ಮಾಡಲು ಸಹಕಾರಿಯಾಗಿದೆ. ಕ್ರೀಸ್ನಲ್ಲಿ ನೀನು ಸ್ವಲ್ಪ ಸಮಯ ಕಳೆಯಬೇಕಷ್ಟೆ ಎಂದು ನನಗೆ ವಿರಾಟ್ ಮತ್ತು ಧವನ್ ಹೇಳಿದ್ದರು. ಆದರೆ, ನಮ್ಮ ಜೊತೆಯಾಟ ಮುಂದೆ ಸಾಗಲಿಲ್ಲ. ತೆಂಬಾ ಹಾಗೂ ಡುಸೆನ್ ಉತ್ತಮ ಬ್ಯಾಟಿಂಗ್ ಮಾಡಿದರು. ಬೌಲರ್‌ಗಳ ಮೇಲೆ ಸಾಕಷ್ಟು ಒತ್ತಡ ಹಾಕಿದರು. ಮಧ್ಯಮದಲ್ಲಿ ನಾವು ವಿಕೆಟ್ ಕೀಳಲು ಸಾಧ್ಯವಾಗಲೇ ಇಲ್ಲ. ನಾವು ಗೆಲ್ಲಬೇಕಿದ್ದರೆ ಜೊತೆಯಾಟ ಮುಖ್ಯವಾಗಿತ್ತು. ಪ್ರತಿ ಪಂದ್ಯಕೂಡ ನಮಗೆ ಮುಖ್ಯ. ನಮ್ಮಿಂದ ಸಾಧ್ಯವಾದಷ್ಟು ಪ್ರದರ್ಶನ ನೀಡುತ್ತಲೇ ಇದ್ದೇವೆ. ಏಕದಿನ ಕ್ರಿಕೆಟ್ ಅನ್ನು ನಾವು ಸುಮಾರು ಸಮಯದ ಬಳಿಕ ಆಡುತ್ತಿದ್ದೇವೆ. ವಿಶ್ವಕಪ್ ಕೂಡ ಇರುವುದರಿಂದ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಬಗ್ಗೆ ತಯಾರಿಕೂಡ ಮಾಡಬೇಕಿದೆ. ನಾವು ತಪ್ಪು ಮಾಡಿದ್ದೇವೆ ನಿಜ, ಇದರಿಂದ ಕಲಿತಿದ್ದೇವೆ ಕೂಡ,” ಎಂದು ರಾಹುಲ್ ಹೇಳಿದ್ದಾರೆ.
ಒಟ್ಟಾರೆ ರಾಹುಲ್ ಪ್ರಕಾರ ಭಾರತದ ಸೋಲಿಗೆ ಮಧ್ಯಮ ಕ್ರಮಾಂಕದ ಆಟಗಾರರು ಪ್ರಮುಖ ಕಾರಣ. ಭಾರತ ಬ್ಯಾಟಿಂಗ್ ವಿಭಾಗದ ಮಧ್ಯಮ ಕ್ರಮಾಂಕ ಹಾಗೂ ಪಂದ್ಯದ ಮಧ್ಯದ ವೇಳೆ ಬೌಲರ್‌ಗಳು ವಿಕೆಟ್ ತೆಗೆಯಲಾಗದೇ ಇದ್ದದ್ದು ತಂಡದ ಹಿನ್ನಡೆಗೆ ಕಾರಣವಾಯಿತು ಎಂಬುದು ರಾಹುಲ್ ಅಭಿಪ್ರಾಯ.
South Africa vs India: ಸ್ಟಾರ್ ಆಟಗಾರರ ದಂಡೇ ಇದ್ದರೂ ಸೋಲುತ್ತಿದೆ ಭಾರತ: ಎಡವುತ್ತಿರುವುದು ಎಲ್ಲಿ?