Ranji Trophy: 3 ದಶಕಗಳ ಬಳಿಕ ಟ್ರೋಫಿ ಗೆಲ್ಲುವ ಬಂಗಾಳದ ಕನಸು ಭಗ್ನ; 2ನೇ ಬಾರಿಗೆ ಪ್ರಶಸ್ತಿ ಗೆದ್ದ ಸೌರಾಷ್ಟ್ರ

| Updated By: ಪೃಥ್ವಿಶಂಕರ

Updated on: Feb 19, 2023 | 12:43 PM

Ranji Trophy 2023: ಜಯದೇವ್ ಉನದ್ಕಟ್ ನೇತೃತ್ವದ ಸೌರಾಷ್ಟ್ರ ತಂಡ ಈ ಆವೃತ್ತಿಯ ರಣಜಿ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸುವುದರೊಂದಿಗೆ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.

Ranji Trophy: 3 ದಶಕಗಳ ಬಳಿಕ ಟ್ರೋಫಿ ಗೆಲ್ಲುವ ಬಂಗಾಳದ ಕನಸು ಭಗ್ನ; 2ನೇ ಬಾರಿಗೆ ಪ್ರಶಸ್ತಿ ಗೆದ್ದ ಸೌರಾಷ್ಟ್ರ
ಚಾಂಪಿಯನ್ ಸೌರಾಷ್ಟ್ರ ತಂಡ
Follow us on

ಜಯದೇವ್ ಉನದ್ಕಟ್ (Jaydev Unadkat) ನೇತೃತ್ವದ ಸೌರಾಷ್ಟ್ರ ತಂಡ ಈ ಆವೃತ್ತಿಯ ರಣಜಿ ಫೈನಲ್ (Ranji Trophy) ಪಂದ್ಯದಲ್ಲಿ ಬಂಗಾಳ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸುವುದರೊಂದಿಗೆ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಇದರೊಂದಿಗೆ ಸುಮಾರು 3 ದಶಕಗಳ ನಂತರ ರಣಜಿ ಟ್ರೋಫಿ ಗೆಲ್ಲುವ ಬಂಗಾಳದ ಕನಸನ್ನು ಸೌರಾಷ್ಟ್ರ ಭಗ್ನಗೊಳಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಸೌರಾಷ್ಟ್ರ ತಂಡ ಬಂಗಾಳದ ಮೇಲೆ ಆರಂಭದಿಂದಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಹೀಗಾಗಿ ಬಂಗಾಳ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಶಹಬಾಜ್ ಅಹಮ್ಮದ್ ಹಾಗೂ ಅಭಿಷೇಕ್ ಅವರ ಅರ್ಧಶತಕದ ನೆರವಿನಿಂದ 174 ರನ್ ಕಲೆ ಹಾಕಿತು.

ಸೌರಾಷ್ಟ್ರ ಪರ ನಾಯಕ ಉನದ್ಕಟ್ ಹಾಗೂ ಚೇತನ್ ಸಕಾರಿಯಾ ತಲಾ 3 ವಿಕೆಟ್ ಪಡೆದರೆ, ಚಿರಾಗ್ ಜಾನಿ 2 ವಿಕೆಟ್ ಪಡೆದರು. ಇದಾದ ಬಳಿಕ ಮೈದಾನಕ್ಕಿಳಿದ ಸೌರಾಷ್ಟ್ರ ತಂಡ ಹಾರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್, ಅರ್ಪಿತ್ ಮತ್ತು ಚಿರಾಗ್ ಜಾನಿ ಅವರ ಅರ್ಧಶತಕಗಳ ಆಧಾರದ ಮೇಲೆ ತನ್ನ ಇನ್ನಿಂಗ್ಸ್‌ನಲ್ಲಿ 404 ರನ್ ಗಳಿಸಿತು. ಹೀಗಾಗಿ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿಯೇ ಬಂಗಾಳದ ಮೇಲೆ ಒತ್ತಡ ಹೇರಿದ್ದರಿಂದ ಮನೋಜ್ ತಿವಾರಿ ನಾಯಕತ್ವದ ಬಂಗಾಳ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 241 ರನ್ ಗಳಿಸಲಷ್ಟೇ ಶಕ್ತವಾಯಿತು.

ನಾಯಕನ ಆಟ ಆಡಿದ ಉನದ್ಕಟ್

ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಂಗಾಳ ತಂಡದ ಪರ ಅನುಸ್ತಾಪ್ ಮಜುಂದಾರ್ ಮತ್ತು ಮನೋಜ್ ತಿವಾರಿ ಇಬ್ಬರೂ ಅರ್ಧಶತಕ ಗಳಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಸೌರಾಷ್ಟ್ರ ಬೌಲಿಂಗ್ ಮುಂದೆ ಮಂಕಾದರು. ನಾಯಕ ಉನದ್ಕಟ್ ಎರಡನೇ ಇನ್ನಿಂಗ್ಸ್‌ನಲ್ಲಿ 85 ರನ್‌ಗಳಿಗೆ 6 ವಿಕೆಟ್ ಪಡೆದರು. ಹೀಗಾಗಿ ಮೊದಲೇ ಇನಿಂಗ್ಸ್‌ ಹಿನ್ನಡೆ ಅನುಭವಿಸಿದ್ದ ಬಂಗಾಳ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅದನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸೌರಾಷ್ಟ್ರದ ಮುಂದೆ ಕೇವಲ 12 ರನ್‌ಗಳ ಗುರಿಯನ್ನು ನೀಡಿತ. ಇದನ್ನು ಉನದ್ಕಟ್ ತಂಡ ಒಂದು ವಿಕೆಟ್ ನಷ್ಟದಲ್ಲಿ ಸಾಧಿಸಿತು.

ನಾಯಕತ್ವದಲ್ಲೂ ಮಿಂಚಿದ ಉನದ್ಕಟ್

ಬೌಲಿಂಗ್​ನಲ್ಲಿ ಮಿಂಚಿದ ಉನದ್ಕಟ್ ತನ್ನ ನಾಯಕತ್ವದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಸೌರಾಷ್ಟ್ರ ಕಳೆದ ವರ್ಷ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು. 2019-2020ರಲ್ಲಿಯೂ ಸೌರಾಷ್ಟ್ರ, ಬಂಗಾಳವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sun, 19 February 23