ವಿಜಯ ಹಝಾರೆ ಟ್ರೋಫಿಯ ಚಾಂಪಿಯನ್ ತಂಡ ಕರ್ನಾಟಕ ರಣಜಿ ಟೂರ್ನಿಯಲ್ಲೂ ಪರಾಕ್ರಮ ಮುಂದುವರೆಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್ ಸಿ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಕೇವಲ 55 ರನ್ಗಳಿಗೆ ಆಲೌಟ್ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿದ ಪಂಜಾಬ್ ತಂಡಕ್ಕೆ ಅಭಿಲಾಷ್ ಶೆಟ್ಟಿ ಮೊದಲ ಆಘಾತ ನೀಡಿದರು.
ನಾಯಕ ಶುಭ್ಮನ್ ಗಿಲ್ (4) ಅವರನ್ನು ಔಟ್ ಮಾಡುವ ಮೂಲಕ ಅಭಿಲಾಷ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಾಸುಕಿ ಕೌಶಿಕ್ ಎಸೆತದಲ್ಲಿ ಪುಖರಾಜ್ ಮನ್ (1) ವಿಕೆಟ್ ಕೀಪರ್ ಕೃಷ್ಣನ್ ಶೀಜಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಅನ್ಮೋಲ್ಪ್ರೀತ್ ಸಿಂಗ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಕೌಶಿಕ್ ಯಶಸ್ವಿಯಾದರು.
ಇನ್ನು 8ನೇ ಓವರ್ನಲ್ಲಿ ಮತ್ತೆ ಬಂದ ಅಭಿಲಾಷ್ ಶೆಟ್ಟಿ, ಪ್ರಭ್ಸಿಮ್ರಾನ್ ಸಿಂಗ್ (6) ಹಾಗೂ ಸುಖದೀಪ್ ಬಾಜ್ವಾ (0) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರ ನಡುವೆ ಸನ್ವೀರ್ ಸಿಂಗ್ (1) ಹಾಗೂ ರಮಣದೀಪ್ ಸಿಂಗ್ (16) ವಿಕೆಟ್ ಪಡೆಯುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು.
ಅಂತಿಮವಾಗಿ ಮಯಾಂಕ್ ಮಾರ್ಕಂಡೆ (12) ಹಾಗೂ ಜಸಿಂದರ್ ಸಿಂಗ್ (4) ವಾಸುಕಿ ಕೌಶಿಕ್ಗೆ ವಿಕೆಟ್ ಒಪ್ಪಿಸಿದರೆ, ಆರಾಧ್ಯ ಶುಕ್ಲಾ (0) ಗೆ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶೋವರ್ಧನ್ ಪರಂತಪ್ ಯಶಸ್ವಿಯಾದರು.
ಕನ್ನಡಿಗರ ಈ ಭರ್ಜರಿ ಬೌಲಿಂಗ್ ಪರಿಣಾಮ ಪಂಜಾಬ್ ತಂಡವು ಮೊದಲ ಇನಿಂಗ್ಸ್ನಲ್ಲಿ 29 ಓವರ್ಗಳಲ್ಲಿ ಕೇವಲ 55 ರನ್ಗಳಿಸಿ ಆಲೌಟ್ ಆಗಿದೆ. ಇತ್ತ ಕರ್ನಾಟಕ ಪರ ವಾಸುಕಿ ಕೌಶಿಕ್ 11 ಓವರ್ಗಳಲ್ಲಿ 16 ರನ್ ನೀಡಿ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಪಡೆದರು. ಇನ್ನು ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದರೆ, ಯಶೋವರ್ಧನ್ ಪರಂತಪ್ ಒಂದು ವಿಕೆಟ್ ಪಡೆದಿದ್ದಾರೆ.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ , ಯಶೋವರ್ಧನ್ ಪರಂತಪ್ , ಪ್ರಸಿದ್ಧ್ ಕೃಷ್ಣ , ವಾಸುಕಿ ಕೌಶಿಕ್ , ಅಭಿಲಾಷ್ ಶೆಟ್ಟಿ.
ಇದನ್ನೂ ಓದಿ: ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್
ಪಂಜಾಬ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ) , ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅನ್ಮೋಲ್ಪ್ರೀತ್ ಸಿಂಗ್ , ಪುಖ್ರಾಜ್ ಮನ್ , ಸನ್ವಿರ್ ಸಿಂಗ್ , ರಮಣದೀಪ್ ಸಿಂಗ್ , ಜಸಿಂದರ್ ಸಿಂಗ್ , ಸುಖದೀಪ್ ಬಾಜ್ವಾ , ಆರಾಧ್ಯ ಶುಕ್ಲಾ , ಮಯಾಂಕ್ ಮಾರ್ಕಾಂಡೆ , ಗುರ್ನೂರ್ ಬ್ರಾರ್.