Ranji Trophy 2025: 9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ

Ranji Trophy 2025: 9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ

ಝಾಹಿರ್ ಯೂಸುಫ್
|

Updated on:Jan 23, 2025 | 2:34 PM

Ranji Trophy 2025 Siddharth Desai: ರಣಜಿ ಟೂರ್ನಿ ಇತಿಹಾಸದಲ್ಲಿ ಗುಜರಾತ್ ಪರ ಒಂದೇ ಇನಿಂಗ್ಸ್​ನಲ್ಲಿ 9 ವಿಕೆಟ್ ಕಬಳಿಸಿದ ವಿಶೇಷ ದಾಖಲೆಯೊಂದನ್ನು ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ನಿರ್ಮಿಸಿದ್ದಾರೆ. ಉತ್ತರಾಖಂಡ್ ವಿರುದ್ಧ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿ, ಗುಜರಾತ್ ತಂಡದ ಪರ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ರಣಜಿ ಟೂರ್ನಿ ಗ್ರೂಪ್-ಬಿ ಪಂದ್ಯದಲ್ಲಿ ಗುಜರಾತ್ ತಂಡದ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ದಾಖಲೆ ಬರೆದಿದ್ದಾರೆ. ಅದು ಕೂಡ ಬರೋಬ್ಬರಿ 9 ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಅಹಮದಾಬಾದ್​ನ ಗುಜರಾತ್​ ಕಾಲೇಜ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ್ ತಂಡವು ಸಿದ್ಧಾರ್ಥ್ ಸ್ಪಿನ್​ ಮೋಡಿಗೆ ಪೆವಿಲಿಯನ್ ಪರೇಡ್ ನಡೆಸಿತು.

ಉತ್ತರಾಖಂಡ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶು ಖಂಡೂರಿ (7) ಯನ್ನು ಔಟ್ ಮಾಡಿ ವಿಕೆಟ್ ಬೇಟೆ ಆರಂಭಿಸಿದ ಸಿದ್ಧಾರ್ಥ್ ದೇಸಾಯಿ, ಬ್ಯಾಕ್ ಟು ಬ್ಯಾಕ್ 9 ವಿಕೆಟ್ ಕಬಳಿಸಿದ್ದು ವಿಶೇಷ. ಆದರೆ ಕೊನೆಯ ಬ್ಯಾಟರ್ ಹರ್ಷ ಪಟ್ವಾಲ್ (0)​ ರನ್ನು ವಿಶಾಲ್ ಜೈಸ್ವಾಲ್ ಬೌಲ್ಡ್ ಮಾಡಿದರು.  ಇದರೊಂದಿಗೆ ಇನಿಂಗ್ಸ್​ವೊಂದರಲ್ಲಿ 10 ವಿಕೆಟ್ ಕಬಳಿಸುವ ಅವಕಾಶ ಸಿದ್ಧಾರ್ಥ್ ದೇಸಾಯಿ ಕೈ ತಪ್ಪಿತು.

ಇದಾಗ್ಯೂ 15 ಓವರ್​ಗಳಲ್ಲಿ ಕೇವಲ 36 ರನ್ ನೀಡಿ 9 ವಿಕೆಟ್ ಕಬಳಿಸಿದ ಸಿದ್ಧಾರ್ಥ್ ದೇಸಾಯಿ ಗುಜರಾತ್ ಪರ ರಣಜಿ ಟೂರ್ನಿಯಲ್ಲಿ ಒಂದೇ ಇನಿಂಗ್ಸ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರು. ಇನ್ನು ಸಿದ್ಧಾರ್ಥ್ ಅವರ ಈ ಸ್ಪಿನ್ ಮೋಡಿಗೆ ತತ್ತರಿಸಿದ ಉತ್ತರಾಖಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 111 ರನ್​ಗಳಿಗೆ ಆಲೌಟ್ ಆಗಿದೆ.

 

Published on: Jan 23, 2025 02:33 PM