
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಆಕರ್ಷಕ ಶತಕ ಬಾರಿಸಿದ್ದಾರೆ. ಹರ್ಯಾಣ ವಿರುದ್ಧದ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮುಂಬೈ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಾನೆ 180 ಎಸೆತಗಳಲ್ಲಿ 13 ಫೋರ್ಗಳೊಂದಿಗೆ 108 ರನ್ ಬಾರಿಸಿ ಮಿಂಚಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಪ್ರಥಮ ಇನಿಂಗ್ಸ್ನಲ್ಲಿ 315 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹರ್ಯಾಣ ತಂಡವು ನಾಯಕ ಅಂಕಿತ್ ಕುಮಾರ್ (136) ಅವರ ಶತಕದ ನೆರವಿನಿಂದ 301 ರನ್ ಕಲೆಹಾಕಿತು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ಅದ್ಭುತ ಇನಿಂಗ್ಸ್ ಆಡಿದರು.
ಅದರಲ್ಲೂ ಬಿರುಸಿನ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದ ಸೂರ್ಯಕುಮಾರ್ ಯಾದವ್ 86 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 70 ರನ್ ಬಾರಿಸಿದರು. ಮತ್ತೊಂದೆಡೆ ಅಜಿಂಕ್ಯ ರಹಾನೆ 180 ಎಸೆತಗಳಲ್ಲಿ 13 ಫೋರ್ಗಳೊಂದಿಗೆ 108 ರನ್ ಕಲೆಹಾಕಿದರು. ಈ ಭರ್ಜರಿ ಶತಕದ ನೆರವಿನಿಂದ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 339 ರನ್ ಕಲೆಹಾಕಿ ಆಲೌಟ್ ಆಗಿದೆ.
ಅದರಂತೆ ಇದೀಗ ಹರ್ಯಾಣ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 354 ರನ್ಗಳ ಗುರಿ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ಗೇರಲಿದೆ. ಹೀಗಾಗಿ ಈ ಮ್ಯಾಚ್ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಹರ್ಯಾಣ ಪ್ಲೇಯಿಂಗ್ 11: ಲಕ್ಷ್ಯ ದಲಾಲ್ , ಯಶ್ ವರ್ಧನ್ ದಲಾಲ್ , ಅಂಕಿತ್ ಕುಮಾರ್ (ನಾಯಕ) , ಹಿಮಾಂಶು ರಾಣಾ , ನಿಶಾಂತ್ ಸಿಂಧು , ರೋಹಿತ್ ಪರ್ಮೋದ್ ಶರ್ಮಾ ( ವಿಕೆಟ್ ಕೀಪರ್ ) , ಜಯಂತ್ ಯಾದವ್ , ಸುಮಿತ್ ಕುಮಾರ್ , ಅನ್ಶುಲ್ ಕಾಂಬೋಜ್ , ಅನುಜ್ ಥಕ್ರಾಲ್ , ಅಜಿತ್ ಚಹಲ್.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಮುಂಬೈ ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ , ಆಕಾಶ್ ಆನಂದ್ ( ವಿಕೆಟ್ ಕೀಪರ್ ) , ಸಿದ್ಧೇಶ್ ಲಾಡ್ , ಅಜಿಂಕ್ಯ ರಹಾನೆ ( ನಾಯಕ ) , ಸೂರ್ಯಕುಮಾರ್ ಯಾದವ್ , ಶಿವಂ ದುಬೆ , ಶಮ್ಸ್ ಮುಲಾನಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ರಾಯ್ಸ್ಟನ್ ಡಯಾಸ್.