
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಈ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿದೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್ನಲ್ಲಿ 311 ರನ್ ಕಲೆಹಾಕಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಮಹಾರಾಷ್ಟ್ರ ತಂಡವನ್ನು 300 ರನ್ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು. ಕರ್ನಾಟಕ ಪರ ಉತ್ತಮ ಸ್ಪಿನ್ ದಾಳಿ ಸಂಘಟಿಸಿದ ಶ್ರೇಯಸ್ ಗೋಪಾಲ್ 35 ಓವರ್ಗಳಲ್ಲಿ 70 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದಾದ ಬಳಿಕ 11 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಮಯಾಂಕ್ 249 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 103 ರನ್ ಬಾರಿಸಿದರು.
ಇನ್ನು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಭಿನವ್ ಮನೋಹರ್ 161 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 96 ರನ್ ಬಾರಿಸಿ ಔಟಾದರು. ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ತಂಡವು 8 ವಿಕೆಟ್ ಕಳೆದುಕೊಂಡು 309 ರನ್ ಕಲೆಹಾಕಿತು. ಈ ಮೂಲಕ ಕರ್ನಾಟಕ ತಂಡವು ಈ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಬಾಬರ್ ಆಝಂ
ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಎಲೈಟ್ ಗ್ರೂಪ್-ಬಿನಲ್ಲಿ ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡವು ಆಡಿರುವ 4 ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಮೂರು ಡ್ರಾಗಳೊಂದಿಗೆ ಒಟ್ಟು 14 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಹಾಗೆಯೇ ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ್ ತಂಡ ಕಾಣಿಸಿಕೊಂಡಿದೆ.