ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ತಮ್ಮ 86 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಟಾಟಾ ಅವರು ಇಹಲೋಕದ ವ್ಯವಹಾರವನ್ನು ಮುಗಿಸಿ ಹೊರಟಿದ್ದಾರೆ. ಮಧ್ಯಮ ವರ್ಗದ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದ ಟಾಟಾ ಅವರು ಉದ್ಯಮದಲ್ಲಿ ಮಾತ್ರವಲ್ಲದೆ ವಿವಿದ ಕ್ಷೇತ್ರಗಳಲ್ಲೂ ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಮಾಡಿದ್ದರು. ಅದರಲ್ಲೂ ಪ್ರಸ್ತುತ ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಭಾರತ ಕ್ರಿಕೆಟ್‌ಗೆ ಟಾಟಾ ನೀಡಿದ ಕೊಡುಗೆ ಅಪಾರ.
ಭಾರತಕ್ಕೆ ಕ್ರಿಕೆಟ್ ಕಾಲಿಟ್ಟು ವರ್ಷಗಳೇ ಕಳೆದಿದ್ದರೂ, 1983 ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕವಷ್ಟೇ ದೇಶದಲ್ಲಿ ಅದರ ಜನಪ್ರಿಯತೆ ಹೆಚ್ಚಾಯಿತು. ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾರೂ ಊಹಿಸದ ಸಾಧನೆಯನ್ನು ಮಾಡಿತ್ತು. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾದ ಚೊಚ್ಚಲ ವಿಶ್ವಕಪ್ನ ಅವಿಸ್ಮರಣೀಯ ವಿಜಯಕ್ಕೆ ರತನ್ ಟಾಟಾ ಅವರ ಕೊಡುಗೆ ಗಮನಾರ್ಹವಾಗಿದೆ. ಟಾಟಾ ಒಡೆತನದ ಸಂಸ್ಥೆಗಳ ಸಹಾಯದಿಂದ ಕ್ರಿಕೆಟ್ನಲ್ಲಿ ಪರಿಣಿತಿ ಪಡೆದ ಸ್ಟಾರ್ ಆಟಗಾರರು 1983 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಅವರುಗಳಲ್ಲಿ ಪ್ರಮುಖರು ಮೊಹಿಂದರ್ ಅಮರನಾಥ್, ರವಿಶಾಸ್ತ್ರಿ ಮತ್ತು ಸಂದೀಪ್ ಪಾಟೀಲ್.
ವಾಸ್ತವವಾಗಿ 1983 ರ ವಿಶ್ವಕಪ್‌ಗೆ ಮೊದಲು ಮೊಹಿಂದರ್ ಅಮರನಾಥ್ ಅವರು ಟಾಟಾ ಒಡೆತನದ ಏರ್ ಇಂಡಿಯಾ ಪರ ಆಡಿದ್ದರೆ, ಸಂದೀಪ್ ಪಾಟೀಲ್ ಟಾಟಾ ಆಯಿಲ್ ಮಿಲ್ಸ್ ಪರ, ರವಿಶಾಸ್ತ್ರಿ ಟಾಟಾ ಸ್ಟೀಲ್ ಪರ ಆಡುತ್ತಿದ್ದರು. ಹೀಗಾಗಿ, ಎಲ್ಲಾ ಮೂರು ಆಟಗಾರರು ಟಾಟಾ ಬೆಂಬಲಿತ ದೇಶೀಯ ತಂಡಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಟಾಟಾ ಅವರ ಬೆಂಬಲದಿಂದಲೇ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆಯಲು ಸಾಧ್ಯವಾಯಿತು.
ಭಾರತೀಯ ಕ್ರಿಕೆಟ್‌ಗೆ ಟಾಟಾ ಅವರ ಕೊಡುಗೆ ಇದಕ್ಕಷ್ಟೇ ಸೀಮಿತವಾಗಿಲ್ಲ. ಈ ಮೂವರು ಕ್ರಿಕೆಟಿಗರನ್ನು ಹೊರತುಪಡಿಸಿ, ಫಾರೂಕ್ ಇಂಜಿನಿಯರ್ (ಟಾಟಾ ಮೋಟಾರ್ಸ್), ಜಾವಗಲ್ ಶ್ರೀನಾಥ್ (ಇಂಡಿಯನ್ ಏರ್‌ಲೈನ್ಸ್), ಸಂಜಯ್ ಮಂಜ್ರೇಕರ್ (ಏರ್ ಇಂಡಿಯಾ), ಕಿರಣ್ ಮೋರ್ (ಟಿಎಸ್‌ಸಿ), ರುಸಿ ಸೂರ್ತಿ (ಐಎಚ್‌ಸಿಎಲ್), ಸಂದೀಪ್ ಪಾಟೀಲ್, ವಿವಿಎಸ್ ಲಕ್ಷ್ಮಣ್ (ಇಂಡಿಯನ್ ಏರ್‌ಲೈನ್ಸ್), ಯುವರಾಜ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಹರ್ಭಜನ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಸುರೇಶ್ ರೈನಾ (ಏರ್ ಇಂಡಿಯಾ), ರಾಬಿನ್ ಉತ್ತಪ್ಪ (ಏರ್ ಇಂಡಿಯಾ), ಮೊಹಮ್ಮದ್ ಕೈಫ್ (ಇಂಡಿಯನ್ ಏರ್ಲೈನ್ಸ್), ನಿಖಿಲ್ ಚೋಪ್ರಾ (ಇಂಡಿಯನ್ ಏರ್ಲೈನ್ಸ್), ಇರ್ಫಾನ್ ಪಠಾಣ್ (ಏರ್ ಇಂಡಿಯಾ), ಆರ್.ಪಿ. ಸಿಂಗ್ (ಟಾಟಾ ಗ್ರೂಪ್) ಕೂಡ ಟಾಟಾ ಒಡೆತನದ ಸಂಸ್ಥೆಗಳ ಸಹಕಾರದಿಂದ ಕ್ರಿಕೆಟ್ನಲ್ಲಿ ತಮ್ಮದೇ ಛಾಪು ಮೂಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 10 October 24