ಟೀಮ್ ಇಂಡಿಯಾದ ಹೀನಾಯ ಸೋಲಿನ ಬೆನ್ನಲ್ಲೇ ನಿವೃತ್ತಿ ಕಾರಣ ಬಿಚ್ಚಿಟ್ಟ ಅಶ್ವಿನ್

Ravichandran Ashwin: ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ  ವೇಳೆ 200 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 27246 ಎಸೆತಗಳ ಮೂಲಕ ಒಟ್ಟು 537 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಹೀನಾಯ ಸೋಲಿನ ಬೆನ್ನಲ್ಲೇ ನಿವೃತ್ತಿ ಕಾರಣ ಬಿಚ್ಚಿಟ್ಟ ಅಶ್ವಿನ್
Ashwin

Updated on: Nov 27, 2025 | 9:55 AM

ಭಾರತ ತಂಡ ಮತ್ತೊಮ್ಮೆ ಸರಣಿ ಸೋತಿದೆ. ಈ ಬಾರಿ ಕೂಡ ತವರಿನಲ್ಲಿ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಒಳಗಾಗಿದೆ. ನ್ಯೂಝಿಲೆಂಡ್ ವಿರುದ್ಧದ 3-0 ಅಂತರದ ಹೀನಾಯ ಸೋಲು ಮರೆಯುವ ಮುನ್ನವೇ ಇದೀಗ ಸೌತ್ ಆಫ್ರಿಕಾ ತಂಡ 2-0 ಅಂತರದಿಂದ ಟೀಮ್ ಇಂಡಿಯಾವನ್ನು ಬಗ್ಗು ಬಡಿದಿದ್ದಾರೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ತಾನೇಕೆ ನಿವೃತ್ತಿ ನೀಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಚಾನೆಲ್​ ಚರ್ಚೆಯೊಂದರಲ್ಲಿ ಮಾತನಾಡಿದ ಅಶ್ವಿನ್, 2012  ರಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೋಲನುಭವಿಸಿತ್ತು. ಈ ಸೋಲಿನ ಬಳಿಕ ನಾನೊಂದು ಪ್ರತಿಜ್ಞೆ ತೆಗೆದುಕೊಂಡಿದ್ದೆ. ಆ ಪ್ರತಿಜ್ಞೆ ಎಂದರೆ ಭಾರತ ಮುಂದಿನ ಬಾರಿ ತವರಿನಲ್ಲಿ ಮತ್ತೊಂದು ಟೆಸ್ಟ್ ಸರಣಿಯನ್ನು ಸೋತರೆ, ನಿವೃತ್ತಿ ಹೊಂದುವುದಾಗಿಯಾಗಿತ್ತು.

ಇದಾದ ಬಳಿಕ ಟೀಮ್ ಇಂಡಿಯಾ ಒಮ್ಮೆಯೂ ತವರಿನಲ್ಲಿ ಟೆಸ್ಟ್ ಸರಣಿ ಸೋತಿರಲಿಲ್ಲ. ಆದರೆ 2024 ರಲ್ಲಿ ಭಾರತ ತಂಡವನ್ನು ನ್ಯೂಝಿಲೆಂಡ್ 3-0 ಅಂತರದಿಂದ ವೈಟ್ ವಾಶ್ ಮಾಡಿತ್ತು. ಈ ಸರಣಿ ಸೋಲೇ ನಾನು ಇಂದು ಮನೆಯಲ್ಲಿ ಕುಳಿತುಕೊಳ್ಳಲು ಕಾರಣ ಎಂದು ಅಶ್ವಿನ್ ಹೇಳಿದ್ದಾರೆ.

ಅಂದರೆ ತವರಿನಲ್ಲಿ ಟೀಮ್ ಇಂಡಿಯಾ ಯಾವಾಗ ಟೆಸ್ಟ್ ಸರಣಿ ಸೋಲುತ್ತೋ, ಆವಾಗ ನಿವೃತ್ತಿ ನಿರ್ಧಾರ ತೆಗೆದುಕೊಳ್ಳಲು ಅಶ್ವಿನ್ ನಿರ್ಧರಿಸಿದ್ದರು. ಅದರಂತೆ 2024 ರಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್ ಸರಣಿ ಸೋತಿತ್ತು. ಇದಾದ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ನಿವೃತ್ತಿ ಘೋಷಿಸಿದ್ದರು.

ತವರಿನಲ್ಲಿ ಸರಣಿ ಸೋಲುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ನ್ಯೂಝಿಲೆಂಡ್ ವಿರುದ್ಧದ ಸೋಲು ನನ್ನನ್ನು ಸಂಪೂರ್ಣ ಕುಗ್ಗಿಸಿತು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಡುವೆ ನಿವೃತ್ತಿ ಘೋಷಿಸಿದೆ ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.

ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ತವರಿನಲ್ಲಿ ಸರಣಿ ಸೋತಿದೆ. ಸೌತ್ ಆಫ್ರಿಕಾ ತಂಡವು ಭಾರತವನ್ನು 2-0 ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಈ ಸೋಲು ಆಟಗಾರರನ್ನು ಕಾಡಲಿದೆ ಎಂದು ಇದೇ ವೇಳೆ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗಿಳಿದ ಟೀಮ್ ಇಂಡಿಯಾ

ಅಂದಹಾಗೆ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ  ವೇಳೆ 200 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 27246 ಎಸೆತಗಳ ಮೂಲಕ ಒಟ್ಟು 537 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.