ಚೇತೇಶ್ವರ ಪೂಜಾರ ಅವರ ಭಾವ ಆತ್ಮಹತ್ಯೆ
Jeet Pabari - Cheteshwar Pujara: ಚೇತೇಶ್ವರ ಪೂಜಾರ ಅವರ ಭಾವ ಜೀತ್ ಪಬಾರಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಈ ಆರೋಪ ಕೇಳಿ ಬಂದ ಒಂದು ವರ್ಷದ ಬಳಿಕ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಜ್ಕೋಟ್ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರ ಭಾವ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ 26 ರಂದು ಪಬಾರಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಇದೀಗ ನಿಖರವಾಗಿ ಒಂದು ವರ್ಷದ ನಂತರ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೀತ್ ಪಬಾರಿ ಬುಧವಾರ ರಾಜ್ಕೋಟ್ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡುವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದೀಗ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಮೆಂಟ್ರೆ ಮಾಡುತ್ತಿದ್ದ ಪೂಜಾರ:
ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಚೇತೇಶ್ವರ ಪೂಜಾರ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯದ ಕಾಮೆಂಟ್ರಿ ಮಾಡುತ್ತಿದ್ದರು. ಅಲ್ಲದೆ ಭಾವ ನಿಧನರಾಗಿರುವ ಸುದ್ದಿ ಬಂದ ಬೆನ್ನಲ್ಲೇ ರಾಜ್ಕೋಟ್ಗೆ ತೆರಳಿದ್ದರು.
ಜೀತ್ ಮೇಲಿತ್ತು ಅತ್ಯಾಚಾರದ ಆರೋಪ:
ನವೆಂಬರ್ 2024 ರಲ್ಲಿ ಜೀತ್ ಪಬಾರಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಲಾಗಿತ್ತು. ಹೀಗೆ ದೂರು ದಾಖಲಿಸಿದ್ದು ಅವರು ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹಿಳೆ. ರಾಜ್ಕೋಟ್ನ ನಿವಾಸಿಯಾಗಿರುವ ಈ ಮಹಿಳೆಯು ಜೀತ್ ಪಬಾರಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸೆಗಿದ್ದಾರೆ ಎಂದು ಆರೋಪಿಸಿದ್ದರು.
ನಮ್ಮ ನಿಶ್ಚಿತಾರ್ಥ ಆದ ಬಳಿಕ ಜೀತ್ ಹಲವಾರು ಬಾರಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ಆನಂತರ ಅವರು ಯಾವುದೇ ಕಾರಣವಿಲ್ಲದೆ ನಿಶ್ಚಿತಾರ್ಥವನ್ನು ಮುರಿದು ಬೇರೆ ಮದುವೆಯಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕೆಂದು ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗಿಳಿದ ಟೀಮ್ ಇಂಡಿಯಾ
ಈ ಪ್ರಕರಣ ದಾಖಲಾದ ಬಳಿಕ ಜೀತ್ ಪಬಾರಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಇದೇ ಕಾರಣದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
