ಸದ್ಯ ಪ್ರಧಾನಿ ಮೋದಿ ತವರಾದ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ (Gujarat assembly elections) ಗರಿಗೆದರಿದೆ. ಗೆಲುವಿನ ಸರಣಿಯನ್ನು ಮುಂದುವರೆಸುವ ತವಕದಲ್ಲಿ ಬಿಜೆಪಿ (BJP) ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದರ ಅಂಗವಾಗಿ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅವರ ಮಡದಿ ರಿವಾಬಾ ಜಡೇಜಾಗೂ (Rivaba Jadeja) ಪಕ್ಷದಿಂದ ಎಮ್ಎಲ್ಎ ಟಿಕೆಟ್ ನೀಡಲಾಗಿದೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗನ ಮಡದಿಯ ರಾಜಕೀಯ ಭವಿಷ್ಯಕ್ಕೆ ಜಡೇಜಾ ಅವರ ಸಹೋದರಿಯೇ ವಿಲನ್ ಆಗಿದ್ದಾರೆ. ವಾಸ್ತವವಾಗಿ ರವೀಂದ್ರ ಜಡೇಜಾ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಚಾರಕಿ ನೈನಾಬಾ ಅವರು ತಮ್ಮ ಸ್ವಂತ ಅತ್ತಿಗೆಯ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ.
ರಿವಾಬಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ನೈನಾಬಾ, ರಿವಾಬಾ ಮತದಾರರ ಅನುಕಂಪ ಪಡೆಯುವ ಸಲುವಾಗಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ನ ಹಿರಿಯ ಪದಾಧಿಕಾರಿಗಳು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.
6 ವರ್ಷಗಳಲ್ಲಿ ಹೆಸರು ಬದಲಾಯಿಸಲು ಸಮಯವಿಲ್ಲ
ಮುಂದುವರೆದು ಮಾತನಾಡಿರುವ ನೈನಾಬಾ, ರಿವಾಬಾ ರಾಜ್‌ಕೋಟ್ ಪಶ್ಚಿಮದ ಮತದಾರೆ. ಹೀಗಿರುವಾಗ ಅವರು ಜಾಮ್‌ನಗರ ಉತ್ತರದಿಂದ ಸ್ಪರ್ಧಿಸಿ ಮತ ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರದಲ್ಲಿ ನನ್ನ ಅತ್ತಿಗೆಯ ನಿಜವಾದ ಹೆಸರು ರಿವಾ ಸಿಂಗ್ ಹರ್ದೇವ್ ಸಿಂಗ್ ಸೋಲಂಕಿ. ಅವರು ರವೀಂದ್ರ ಜಡೇಜಾ ಹೆಸರನ್ನು ಬ್ರಾಕೆಟ್ನಲ್ಲಿ ಇರಿಸಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಅವರು ಜಡೇಜಾ ಎಂಬ ಉಪನಾಮವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಮದುವೆಯಾಗಿ ಬರೋಬ್ಬರಿ ಆರು ವರ್ಷಗಳು ಕಳೆದಿವೆ. ಆದರೆ ಮತದಾನದ ಪಟ್ಟಿಯಲ್ಲಿ ಹೆಸರು ಬದಲಿಸಿಕೊಳ್ಳಲು ಅವರಿಗೆ ಸಮಯ ಸಿಕ್ಕಿಲ್ಲ ಎಂದು ನೈನಾಬಾ, ರಿವಾಬಾ ಅವರನ್ನು ಟೀಕಿಸಿದ್ದಾರೆ.
ರಿವಾಬಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲವೇ?
ಜಾಮ್‌ನಗರ ಉತ್ತರ ವಿಧಾನಸಬಾ ಕ್ಷೇತ್ರ ಕೌಟುಂಬಿಕ ಕಲಹದಿಂದಾಗಿ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಅಲ್ಲದೆ ರಿವಾಬಾ ಜಡೇಜಾ ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇದೇ ವೇಳೆ ಜಡೇಜಾ ಅವರ ಸಹೋದರಿ ಜಾಮ್‌ನಗರ ಉತ್ತರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಸ್ಪರ್ಧಿ ಬಗ್ಗೆ ಮಾತನಾಡಿದ ನೈನಾಬಾ, ವಿಧಾನಸಭೆ ಚುನಾವಣೆಯಲ್ಲಿ ರಿವಾಬಾ ಗೆಲುವಿನ ಸಾಧ್ಯತೆ ಕಡಿಮೆ ಎಂದಿದ್ದಾರೆ.
ರಿವಾಬಾ ಒಬ್ಬ ಸೆಲೆಬ್ರಿಟಿ, ಹೀಗಾಗಿ ಅವರು ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಅರಿತಿರಲಾರರು. ಜಾಮ್‌ನಗರದ ಜನರಿಗೆ ತಮ್ಮ ಕೆಲಸವನ್ನು ಮಾಡುವ ಸ್ಥಳೀಯ ನಾಯಕರ ಅಗತ್ಯವಿದೆ ಎಂದು ನೈನಾಬಾ ಹೇಳಿದರು. ಡಿಸೆಂಬರ್ 1 ರಂದು ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ.