9ನೇ ಕ್ರಮಾಂಕದಲ್ಲಿ ಸಿಡಿಲಬ್ಬರ: ವಿಶ್ವ ದಾಖಲೆ ಬರೆದ ಪಾಕ್ ಆಟಗಾರ
ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಪಾಕಿಸ್ತಾನದ 21 ವರ್ಷದ ಯುವ ಆಟಗಾರ ರಝಾವುಲ್ಲಾ ಖಾನ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅವರು, ಬರೋಬ್ಬರಿ 9 ಸಿಕ್ಸರ್ ಸಿಡಿಸುವ ಮೂಲಕ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಾಕಿಸ್ತಾನ್ ತಂಡದ ಯುವ ಪ್ರತಿಭೆ ರಝಾವುಲ್ಲಾ ಖಾನ್ ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 21 ವರ್ಷದ ಯುವ ವೇಗಿ ರಝಾವುಲ್ಲಾ ಖಾನ್, ತಮ್ಮ ಬ್ಯಾಟಿಂಗ್ ಚಾಕಚಕ್ಯತೆಯಿಂದ ಕ್ರಿಕೆಟ್ ಲೋಕವೇ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ರಝಾವುಲ್ಲಾ ಖಾನ್ ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್ನೊಂದಿಗೆ ರಝಾವುಲ್ಲಾ ಚಚ್ಚಿದ್ದು 63 ಎಸೆತಗಳಲ್ಲಿ 81 ರನ್ಗಳು. ಇದರಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 4 ಫೋರ್ಗಳು ಒಳಗೊಂಡಿದ್ದವು. ಈ 9 ಸಿಕ್ಸರ್‌ಗಳೊಂದಿಗೆ ರಝಾವುಲ್ಲಾ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಒಂದೇ ಇನ್ನಿಂಗ್ಸ್‌ನಲ್ಲಿ ದಾಖಲೆಗಳ ಸುರಿಮಳೆ!
- 9 ಸಿಕ್ಸರ್ಗಳ ವಿಶ್ವ ದಾಖಲೆ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಪಾದಾರ್ಪಣೆಯ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ (9 ಸಿಕ್ಸರ್) ಬಾರಿಸಿದ ನ್ಯೂಝಿಲೆಂಡ್‌ನ ಟಿಮ್ ಸೌಥಿ (2008ರಲ್ಲಿ ಇಂಗ್ಲೆಂಡ್ ವಿರುದ್ಧ) ಅವರ ಜಾಗತಿಕ ದಾಖಲೆಯನ್ನು ರಝಾವುಲ್ಲಾ ಖಾನ್ ಸರಿಗಟ್ಟಿದ್ದಾರೆ.
- ಬೆನ್ ಸ್ಟೋಕ್ಸ್ ದಾಖಲೆಗೆ ಸರಿಸಮ: ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (2023ರ ಆ್ಯಶಸ್‌ನಲ್ಲಿ ಲಾರ್ಡ್ಸ್ ಮೈದಾನದಲ್ಲಿ 9 ಸಿಕ್ಸರ್) ಅವರ ದಾಖಲೆಯನ್ನೂ ಕೂಡ ರಝಾವುಲ್ಲಾ ಸರಿಗಟ್ಟಿದ್ದಾರೆ.
- ವೇಗದ ಅರ್ಧಶತಕ: ಕೇವಲ 43 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ಪರ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಫಹೀಮ್ ಅಶ್ರಫ್ (52 ಎಸೆತ) ಅವರ ದಾಖಲೆಯನ್ನು ರಝಾವುಲ್ಲಾ ಖಾನ್ ಮುರಿದರು.
ಈ ಮೂಲಕ 21 ವರ್ಷದ ರಝಾವುಲ್ಲಾ ಖಾನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೂರು ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲಿ ಒಂದು ವಿಶ್ವ ದಾಖಲೆ ಎಂಬುದು ವಿಶೇಷ.
ಬೌಲರ್‌ನಿಂದ ಬ್ಯಾಟಿಂಗ್ ಹೀರೊ ಆದ ಕಥೆ!
ಮೂಲತಃ ಬಲಗೈ ವೇಗದ ಬೌಲರ್ ಆಗಿರುವ ರಝಾವುಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಅವರ ಬೌಲಿಂಗ್ ಸಾಮರ್ಥ್ಯಕ್ಕಾಗಿ. ಆದರೆ, ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅವರು, ತಾವೊಬ್ಬ ಅತ್ಯುತ್ತಮ ‘ಹಿಟ್ಟರ್’ ಎಂಬುದನ್ನು ಸಾಬೀತುಪಡಿಸಿದರು.
ಇಂಗ್ಲೆಂಡ್‌ನ ಸ್ಟಾರ್ ಬೌಲರ್‌ಗಳಾದ ಜೋಫ್ರಾ, ಒಲೀ ರಾಬಿನ್ಸನ್ ಮತ್ತು ಗಸ್ ಅಟ್ಕಿನ್ಸನ್ ಅವರ ಓವರ್‌ಗಳಲ್ಲಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ ರೀತಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಈ ಸಿಡಿಲಬ್ಬದದ ಬ್ಯಾಟಿಂಗ್ನೊಂದಿಗೆ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 449 ರನ್ಗಳಿಸಿ ಆಲೌಟ್ ಆಗಿದೆ.
ಇದನ್ನೂ ಓದಿ: ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಡೌಟ್!
ಅತ್ತ ಮೊದಲ ಇನಿಂಗ್ಸ್ನಲ್ಲಿ 320 ರನ್ಗಳ ಮುನ್ನಡೆ ಹೊಂದಿರುವ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 130 ರನ್ಗಳ ಗುರಿ ಪಡೆದುಕೊಂಡಿದೆ. ಈ 130 ರನ್ಗಳಿಸಿದರೆ ಆಂಗ್ಲರ ಪಡೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದ್ದಾರೆ.




