
ಐಪಿಎಲ್ 2025 (IPL 2025) ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು (RCB vs LSG) ಎದುರಿಸುತ್ತಿದೆ. ಈ ಪಂದ್ಯಕ್ಕೆ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಗಾಯಗೊಂಡಿರುವ ಟಿಮ್ ಡೇವಿಡ್ ಬದಲಿಗೆ ಲಿಯಾಮ್ ಲಿವಿಂಗ್ಸ್ಟೋನ್ ಆಡುತ್ತಿದ್ದರೆ, ಬೌಲರ್ ಲುಂಗಿ ಎಂಗಿಡಿ ಬದಲಿಗೆ ಶ್ರೀಲಂಕಾದ ನುವಾನ್ ತುಷಾರ ಆಡುತ್ತಿದ್ದಾರೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ (Josh Hazlewood) ಕಣಕ್ಕಿಳಿಯುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅದರಂತೆ ಹೇಜಲ್‌ವುಡ್ ಕೂಡ ಪಂದ್ಯಕ್ಕೆ 2 ದಿನ ಮುನ್ನವೇ ತಂಡವನ್ನು ಸೇರಿಕೊಂಡಿದ್ದರು. ಆದಾಗ್ಯೂ ಹೇಜಲ್‌ವುಡ್ ಈ ಪಂದ್ಯದಲ್ಲಿ ಆಡಿಲ್ಲ. ಇದಕ್ಕೆ ಕಾರಣ ಅವರ ಇಂಜುರಿ ಅಲ್ಲ ಬದಲಿಗೆ, ಕ್ರಿಕೆಟ್ ಆಸ್ಟ್ರೇಲಿಯಾದ ಕಟ್ಟುನಿಟ್ಟಿನ ಆಟದ ಶಿಷ್ಟಾಚಾರ.
ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಿಂದಿರುಗಿದ ಹೇಜಲ್‌ವುಡ್ ಗಾಯದಿಂದ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಫಿಟ್ ಆಗಿದ್ದಾರೆಂದು ಹೇಳಲಾಗಿತ್ತು. ಆದಾಗ್ಯೂ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅವರು ಆರ್‌ಸಿಬಿಯ ಪ್ಲೇಯಿಂಗ್ 11 ತಂಡದ ಭಾಗವಾಗಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಹೇಜಲ್‌ವುಡ್ ಈ ಪಂದ್ಯದಲ್ಲಿ ಆಡದಿರಲು ಕಾರಣ ಕ್ರಿಕೆಟ್ ಆಸ್ಟ್ರೇಲಿಯಾದ ಕಟ್ಟುನಿಟ್ಟಿನ ಆಟದ ಶಿಷ್ಟಾಚಾರ, ಇದರ ಅಡಿಯಲ್ಲಿ ಹೇಜಲ್‌ವುಡ್ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಆಟಕ್ಕೆ ಮರಳುವ ಶಿಷ್ಟಾಚಾರದ ನಿಯಮಗಳ ಪ್ರಕಾರ, ಯಾವುದೇ ಆಟಗಾರನು ಗಾಯದಿಂದ ಹಿಂತಿರುಗಿದ ನಂತರ ಪಂದ್ಯದಲ್ಲಿ ಆಡುವ ಮೊದಲು ನೆಟ್‌ನಲ್ಲಿ 70 ರಿಂದ 80 ಎಸೆತಗಳನ್ನು ಬೌಲ್ ಮಾಡಬೇಕು, ಇದರಿಂದ ಆಟಗಾರನು ಸಂಪೂರ್ಣವಾಗಿ ಸಿದ್ಧನಾಗಿದ್ದಾನೆ ಮತ್ತು ಗಾಯವು ಮರುಕಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು. ಮಾಧ್ಯಮ ವರದಿಗಳ ಪ್ರಕಾರ, ಜೋಶ್ ಹೇಜಲ್‌ವುಡ್ ನೆಟ್ಸ್‌ನಲ್ಲಿ ಕೇವಲ 30 ರಿಂದ 40 ಎಸೆತಗಳನ್ನು ಮಾತ್ರ ಬೌಲ್ ಮಾಡಿದ್ದಾರೆ, ಇದು ಶಿಷ್ಟಾಚಾರದ ಮಾನದಂಡಗಳಿಗಿಂತ ತೀರಾ ಕಡಿಮೆ. ಇದರಿಂದಾಗಿ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ.
ಮತ್ತೊಂದೆಡೆ, ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕರಾಗಿರುವ ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್ ಬಗ್ಗೆ ಮಾಹಿತಿ ನೀಡಿದ್ದು, ಅವರು ಮುಂದಿನ ಪಂದ್ಯಗಳಲ್ಲಿ ಆಡುವುದನ್ನು ಕಾಣಬಹುದು ಎಂದರು. ಇದರರ್ಥ ಹೇಜಲ್‌ವುಡ್ ಪ್ಲೇಆಫ್ ಪಂದ್ಯಗಳಿಗೆ ಲಭ್ಯವಿರುತ್ತಾರೆ ಎನ್ನಬಹುದು. ಹೇಜಲ್‌ವುಡ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.
RCB vs LSG Live Score, IPL 2025: ಶತಕ ಪೂರೈಸಿದ ಲಕ್ನೋ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ಇಂಪ್ಯಾಕ್ಟ್ ಪ್ಲೇಯರ್), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್/ನಾಯಕ), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ, ಸುಯೇಶ್ ಶರ್ಮಾ.
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಮ್ಯಾಥ್ಯೂ ಬ್ರೆಟ್ಜ್ಕಿ, ನಿಕೋಲಸ್ ಪೂರನ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಆಯುಷ್ ಬಡೋನಿ, ಅಬ್ದುಲ್ ಸಮದ್, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್, ವಿಲಿಯಂ ಓ ರೂರ್ಕೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ