ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ವಂಚನೆ, ದೈಹಿಕ ಕಿರುಕುಳ ಆರೋಪ.! ಸಿಎಂಗೆ ಮಹಿಳೆ ದೂರು

Yash Dayal: ಆರ್​​ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಲಾಗಿದೆ. ಸಂತ್ರಸ್ತ ಮಹಿಳೆ 5 ವರ್ಷಗಳ ಸಂಬಂಧದ ಬಗ್ಗೆ ಮಾಹಿತಿ ನೀಡಿ, ದಯಾಳ್ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದಯಾಳ್ ಯಾವುದೇ ಹೇಳಿಕೆ ನೀಡಿಲ್ಲವಾದರೂ ಸೋಶಿಯಲ್ ಮೀಡಿಯಾ ಯಾವುದೇ ಭಯವಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ವಂಚನೆ, ದೈಹಿಕ ಕಿರುಕುಳ ಆರೋಪ.! ಸಿಎಂಗೆ ಮಹಿಳೆ ದೂರು
Yash Dayal

Updated on: Jun 28, 2025 | 9:00 PM

ಐಪಿಎಲ್​ನ (IPL) ಪಂದ್ಯವೊಂದರಲ್ಲಿ ಸತತ ಐದು ಎಸೆತಗಳಲ್ಲಿ 5 ಸಿಕ್ಸರ್ ಹೊಡಿಸಿಕೊಂಡು ಕುಖ್ಯಾತಿ ಹಾಗೂ ಅದೇ ಐಪಿಎಲ್‌ನಲ್ಲಿ ತಂಡವೊಂದನ್ನು ಚಾಂಪಿಯನ್‌ ಮಾಡುವ ಮೂಲಕ ಖ್ಯಾತಿ ಪಡೆದಿದ್ದ ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್ ದಯಾಳ್ (Yash Dayal) ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಹಾಗೆಯೇ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ.

ಭಾವಿ ಸೊಸೆ ಎಂದು ಪರಿಚಯಿಸಿದ್ದರು

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ಶೋಷಿಸಿದ್ದಾರೆ. ಅಲ್ಲದೆ ದಯಾಳ್ ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ, ಆ ಬಳಿಕ ನನಗೆ ವಂಚಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಬೇರೆ ಹುಡುಗಿಯರೊಂದಿಗೂ ಸಂಬಂಧ

ದಯಾಳ್ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದ ತಕ್ಷಣ ನಾನು ಇದನ್ನು ಪ್ರತಿಭಟಿಸಿದೆ. ಇದರಿಂದ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸಬೇಕಾಯಿತು. ದಯಾಳ್ ನನ್ನೊಂದಿಗೆ ಮಾತ್ರವಲ್ಲದೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ. ಈ ಬಗ್ಗೆ ನಾನು ಜೂನ್ 14 ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪ ಹೊರಿಸಿದ್ದಾರೆ.

ಸ್ಪಷ್ಟನೆ ನೀಡದ ದಯಾಳ್

ಸಂತ್ರಸ್ತೆ ತನ್ನ ಆರೋಪಗಳಲ್ಲಿ ಎಲ್ಲಿಯೂ ಯಶ್ ದಯಾಳ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಯಶ್ ದಯಾಳ್ ಅವರೊಂದಿಗೆ ತಾವಿರುವ ಫೋಟೋವನ್ನು ಹಂಚಿಕೊಂಡಿರುವುದರಿಂದ ದಯಾಳ್ ವಿರುದ್ಧವೇ ಈ ಮಹಿಳೆ ಆರಂಭ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

IPL 2025: ನನ್ನ ಮಗನ ಈ ಯಶಸ್ಸಿಗೆ ವಿರಾಟ್ ಕೊಹ್ಲಿ ಕಾರಣ ಎಂದ ಯಶ್ ದಯಾಳ್ ತಂದೆ

ಆದಾಗ್ಯೂ, ಈ ವಿಷಯದಲ್ಲಿ ಯಶ್ ದಯಾಳ್ ಅವರಿಂದ ಇದುವರೆಗೆ ಯಾವುದೇ ಸ್ಪಷ್ಟೀಕರಣವಾಗಲಿ ಅಥವಾ ಹೇಳಿಕೆಯಾಗಲಿ ಬಂದಿಲ್ಲ. ಸಂತ್ರಸ್ತ ಮಹಿಳೆ ಜೂನ್ 21 ರಂದು ಸಿಎಂ ಸಹಾಯವಾಣಿಯಲ್ಲಿ ಈ ದೂರು ದಾಖಲಿಸಿದ್ದು, ಜೂನ್ 25 ರಂದು ಸಾಮಾಜಿಕ ಜಾಲತಾಣದಲ್ಲಿ ದೂರಿನ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದರು. ಇದಾದ ಒಂದು ದಿನದ ನಂತರ, ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಯಶ್ ದಯಾಳ್ ‘ಫಿಯರ್‌ಲೆಸ್’ ಎಂದು ಬರೆದುಕೊಂಡಿದ್ದಾರೆ.

ಇದಾದ ನಂತರ, ದಯಾಳ್ ಮಾಡಿರುವ ಪೋಸ್ಟ್ ಅನ್ನು ಗುರಿಯಾಗಿಸಿಕೊಂಡು ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ ಹಂಚಿಕೊಂಡಿರುವ ಸಂತ್ರಸ್ತ ಮಹಿಳೆ, ನೀವು ನಿರ್ಭೀತರಾಗಿದ್ದರೆ ಸತ್ಯವನ್ನು ಎದುರಿಸಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಯಶ್ ದಯಾಳ್ ಜೊತೆಗಿರುವ ಕೆಲವು ಫೋಟೋಗಳನ್ನು ಸಹ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Sat, 28 June 25