RCB: ರಿಟೆನ್ಷನ್ ಪಟ್ಟಿ ಹೊರಬೀಳುವ ಮುನ್ನವೇ ಆರ್​ಸಿಬಿ ಸೇರಿದ ಸ್ಟಾರ್ ಪ್ಲೇಯರ್

|

Updated on: Oct 30, 2024 | 8:49 PM

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025 ರ ರಿಟೆನ್ಷನ್ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ. ಈ ನಡುವೆ, ಆರ್‌ಸಿಬಿ ಮಹಿಳಾ ಪ್ರೀಮಿಯರ್ ಲೀಗ್‌ಗೆ ಇಂಗ್ಲೆಂಡ್‌ನ ಆಟಗಾರ್ತಿ ಡ್ಯಾನಿ ವ್ಯಾಟ್ ಅವರನ್ನು 30 ಲಕ್ಷ ರೂಪಾಯಿಗೆ ಟ್ರೇಡ್ ಮಾಡಿಕೊಂಡಿದೆ.

RCB: ರಿಟೆನ್ಷನ್ ಪಟ್ಟಿ ಹೊರಬೀಳುವ ಮುನ್ನವೇ ಆರ್​ಸಿಬಿ ಸೇರಿದ ಸ್ಟಾರ್ ಪ್ಲೇಯರ್
ಆರ್​ಸಿಬಿ
Follow us on

ಕ್ರಿಕೆಟ್ ಅಭಿಮಾನಿಗಳ ಗಮನವು ಪ್ರಸ್ತುತ ಐಪಿಎಲ್ 2025 ಕ್ಕೆ ಬಿಡುಗಡೆಯಾಗಲಿರುವ ಧಾರಣ ಪಟ್ಟಿಯ ಮೇಲಿದೆ. ಈ ಹಿಂದೆ ನಿಗದಿಯಾಗಿರುವಂತೆ ಎಲ್ಲಾ 10 ಫ್ರಾಂಚೈಸಿಗಳು ಅಕ್ಟೋಬರ್ 31 ರಂದು ತಮ್ಮ ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆಗೊಳಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅದೇ ಸಮಯದಲ್ಲಿ, ಕೊಹ್ಲಿ ಜೊತೆಗೆ ಇತರ ಯಾವ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ. ಏತನ್ಮಧ್ಯೆ, ಆರ್​ಸಿಬಿ ಫ್ರಾಂಚೈಸಿ ಕೂಡ ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಅದರ ಮೊದಲ ಪ್ರಯತ್ನವಾಗಿ ಆರ್​ಸಿಬಿ, ಯುಪಿ ವಾರಿಯರ್ಸ್‌ ಜೊತೆಗೆ ಸ್ಟಾರ್ ಆಟಗಾರ್ತಿಯನ್ನು ಟ್ರೇಡ್ ಮಾಡಿದೆ.

ಆರ್‌ಸಿಬಿ ತಂಡಕ್ಕೆ ಸ್ಟಾರ್ ಪ್ಲೇಯರ್ ಎಂಟ್ರಿ

2025 ರ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಡ್ಯಾನಿ ವ್ಯಾಟ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ ಡ್ಯಾನಿ ವ್ಯಾಟ್ ಕಳೆದ ಸೀಸನ್​ನಲ್ಲಿ ಯುಪಿ ವಾರಿಯರ್ಸ್ ತಂಡದ ಭಾಗವಾಗಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ಯಾನಿ ವ್ಯಾಟ್ ಅವರನ್ನು ಯುಪಿ ವಾರಿಯರ್ಸ್‌ನಿಂದ 30 ಲಕ್ಷ ರೂ.ಗೆ ಟ್ರೇಡ್ ಮಾಡಿಕೊಂಡಿದೆ. ಡ್ಯಾನಿ ವ್ಯಾಟ್ ಇಂಗ್ಲೆಂಡ್‌ನ ಅತ್ಯಂತ ಹಿರಿಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಬಯಕೆಯನ್ನು ಅವರು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಈಗ ಅವರ ಕನಸು ನನಸಾಗಿದೆ.

ಡ್ಯಾನಿ ವ್ಯಾಟ್ ವೃತ್ತಿಜೀವನ

ಡ್ಯಾನಿ ವ್ಯಾಟ್ ಇದುವರೆಗೆ ಇಂಗ್ಲೆಂಡ್ ಪರ 2 ಟೆಸ್ಟ್, 112 ಏಕದಿನ ಮತ್ತು 164 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ್ತಿಯೂ ಆಗಿದ್ದಾರೆ. ಟೆಸ್ಟ್‌ನಲ್ಲಿ 129 ರನ್, ಏಕದಿನದಲ್ಲಿ 1907 ರನ್ ಮತ್ತು ಟಿ20ಯಲ್ಲಿ 2979 ರನ್ ಗಳಿಸಿದ್ದಾರೆ. ಟಿ20ಯಲ್ಲಿ 22.91 ಸರಾಸರಿಯಲ್ಲಿ ರನ್ ಕಲೆಹಾಕಿರುವ ಡ್ಯಾನಿ ಇದರಲ್ಲಿ 16 ಅರ್ಧ ಶತಕ ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಇತ್ತೀಚೆಗೆ ಟಿ20 ವಿಶ್ವಕಪ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಅವರು 4 ಪಂದ್ಯಗಳಲ್ಲಿ 50.33 ಸರಾಸರಿಯಲ್ಲಿ 151 ರನ್ ಗಳಿಸಿದ್ದರು. ಇದರಲ್ಲಿ 1 ಅರ್ಧಶತಕವೂ ಸೇರಿತ್ತು

ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಡ್ಯಾನಿ

ಡ್ಯಾನಿ ವ್ಯಾಟ್ ಈ ಹಿಂದೆ ವಿರಾಟ್ ಕೊಹ್ಲಿಗೆ ಸಾರ್ವಜನಿಕವಾಗಿಯೇ ಮದುವೆ ಪ್ರಸ್ತಾಪ ಮಾಡಿದ್ದರು. ವಾಸ್ತವವಾಗಿ, ಟೀಂ ಇಂಡಿಯಾ 2014 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿತ್ತು. ಆ ಸಮಯದಲ್ಲಿ ಡ್ಯಾನಿ ವ್ಯಾಟ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದರು. ಅದರಲ್ಲಿ ಕೊಹ್ಲಿ ನನ್ನನ್ನು ಮದುವೆಯಾಗು ಎಂದು ಬರೆದುಕೊಂಡಿದ್ದರು. ಆದರೆ ಆ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ಇದು ಕೇವಲ ತಮಾಷೆ ಎಂದು ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ