ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 20ನೇ (IPL 2025) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಿದ್ದ ಆರ್‌ಸಿಬಿ (MI vs RCB) ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆದ್ದುಕೊಂಡಿತು. ಮುಂಬೈ ಗೆಲ್ಲಲು ಕೊನೆಯ ಓವರ್‌ನಲ್ಲಿ 19 ರನ್ ಬೇಕಿತ್ತು. ಈ ವೇಳೆ 20ನೇ ಓವರ್ ಬೌಲಿಂಗ್ ಮಾಡುವ ಜವಬ್ದಾರಿ ಹೊತ್ತ ಕೃನಾಲ್ ಪಾಂಡ್ಯ ಈ ಓವರ್‌ನಲ್ಲಿ 3 ವಿಕೆಟ್ ಕಬಳಿಸಿ ತಂಡಕ್ಕೆ 12 ರನ್‌ಗಳ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 221 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಮುಂಬೈ 209 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ವಾಸ್ತವವಾಗಿ 222 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಒಂದು ಹಂತದಲ್ಲಿ ಈ ಪಂದ್ಯವನ್ನು ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವು ಆರ್‌ಸಿಬಿಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಈ ತಂಡವು 10 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ಸಾಧನೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆಘಾತಕಾರಿ ಆರಂಭ ಪಡೆಯಿತು. ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್, ಫಿಲ್ ಸಾಲ್ಟ್ ಅವರನ್ನು ಬೌಲ್ಡ್ ಮಾಡಿದರು. ಇದಾದ ನಂತರ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಜವಾಬ್ದಾರಿಯನ್ನು ವಹಿಸಿಕೊಂಡು 52 ಎಸೆತಗಳಲ್ಲಿ 91 ರನ್‌ಗಳ ಬೃಹತ್ ಜೊತೆಯಾಟ ನಡೆಸಿದರು. ವಿಘ್ನೇಶ್ ಪುತ್ತೂರು ಅವರು ಪಡಿಕ್ಕಲ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟ ಮುರಿದರು. ಪಡಿಕ್ಕಲ್ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ, ಕಿಂಗ್ ಕೊಹ್ಲಿಗೆ ಜೊತೆಯಾದ ರಜತ್ ಪಟಿದಾರ್ 48 ರನ್‌ಗಳ ಜೊತೆಯಾಟ ಹಂಚಿಕೊಂಡರು.
15ನೇ ಓವರ್‌ನಲ್ಲಿ ನಮನ್ ಧೀರ್ ಎಸೆತದಲ್ಲಿ ಕಿಂಗ್ ಕೊಹ್ಲಿ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದು ಬಿತ್ತು. ಅಂತಿಮವಾಗಿ ಕೊಹ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 67 ರನ್ ಗಳಿಸುವಲ್ಲಿ ಯಶಸ್ವಿಯಾದರು. ಕೇವಲ 29 ಎಸೆತಗಳಲ್ಲಿ ಈ ಸೀಸನ್ನ ಎರಡನೇ ಅರ್ಧಶತಕ ಗಳಿಸಿದ ಕೊಹ್ಲಿಗೆ ಇದು ಐಪಿಎಲ್ ವೃತ್ತಿಜೀವನದ 57 ನೇ ಅರ್ಧಶತಕವಾಗಿತ್ತು. ನಾಯಕನ ಇನ್ನಿಂಗ್ಸ್ ಆಡಿದ ಪಾಟಿದಾರ್ ಕೂಡ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 64 ರನ್ ಗಳಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಜಿತೇಶ್ ಶರ್ಮಾ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ವಿಘ್ನೇಶ್ ಪುತ್ತೂರ್ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಮುಂಬೈಗೆ ಟಾಪ್ ಆರ್ಡರ್ ಮತ್ತೊಮ್ಮೆ ಕೈಕೊಟ್ಟಿತು. ಮೊದಲ ನಾಲ್ವರು ಬ್ಯಾಟರ್ಗಳು ಉತ್ತಮ ಆರಂಭ ಪಡೆದರಾದರೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ ಆ ಬಳಿಕ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಬಿರುಗಾಳಿಯ ಇನ್ನಿಂಗ್ಸ್ ಆಡಿ ಪಂದ್ಯವನ್ನು ಮುಂಬೈನತ್ತ ವಾಲುವಂತೆ ಮಾಡಿದರು. ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳಿಂದ 42 ರನ್ ಗಳಿಸಿದರೆ, ತಿಲಕ್ 29 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು. ಆದರೆ ಈ ಇಬ್ಬರು ಔಟಾದ ತಕ್ಷಣ, ಮುಂಬೈ ಇಂಡಿಯನ್ಸ್ ಸೋಲು ಖಚಿತವಾಗಿತ್ತು. ಮುಂಬೈ ತಂಡ 19ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡಿತು ಮತ್ತು ನಂತರ ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಮೂರು ವಿಕೆಟ್‌ಗಳನ್ನು ಕಬಳಿಸಿ ಆರ್‌ಸಿಬಿಗೆ ಸ್ಮರಣೀಯ ಗೆಲುವು ತಂದುಕೊಟ್ಟರು.
IPL 2025: ಮುಂಬೈ ಬೌಲರ್ಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ರಜತ್; ವಿಡಿಯೋ ನೋಡಿ
ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ 19 ರನ್‌ಗಳು ಬೇಕಾಗಿದ್ದವು. ಹಿಂದಿನ ಓವರ್‌ನಲ್ಲಿ 19 ರನ್‌ಗಳನ್ನು ನೀಡಿದ್ದ ಸ್ಪಿನ್ನರ್ ಕೃನಾಲ್ ಪಾಂಡ್ಯಗೆ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಡಿದರ್ ಬೌಲಿಂಗ್ ಮಾಡುವ ಜವಬ್ದಾರಿ ನೀಡಿದರು. ನಾಯಕನ ನಂಬಿಕೆಯನ್ನು ಉಳಿಸಿಕೊಂಡ ಕೃನಾಲ್ ಸತತ ಎರಡು ಎಸೆತಗಳಲ್ಲಿ ವಿಕೆಟ್ ಪಡೆದರು. ಇದಾದ ನಂತರ, ಅವರು ಐದನೇ ಎಸೆತದಲ್ಲಿ ನಮನ್ ಧೀರ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಕೊನೆಗೊಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 pm, Mon, 7 April 25