RCB vs CSK: ಇಂದು ಬೆಂಗಳೂರಿನಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ: ಸಂಜೆ ವೇಳೆ ಹವಾಮಾನ ಹೇಗಿರಲಿದೆ?

|

Updated on: May 18, 2024 | 7:48 AM

Bengaluru Weather Report, RCB vs CSK: ಐಪಿಎಲ್ 2024 ರಲ್ಲಿ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಪ್ಲೇ ಆಫ್​ನಲ್ಲಿರುವ ಕೇವಲ ಒಂದು ಸ್ಥಾನಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸಿಎಸ್​ಕೆ ಮತ್ತು ಆರ್​ಸಿಬಿ ಎರಡು ತಂಡಗಳು ರೇಸ್‌ನಲ್ಲಿವೆ.

RCB vs CSK: ಇಂದು ಬೆಂಗಳೂರಿನಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ: ಸಂಜೆ ವೇಳೆ ಹವಾಮಾನ ಹೇಗಿರಲಿದೆ?
RCB vs CSK IPL 2024
Follow us on

ಐಪಿಎಲ್ 2024 ರಲ್ಲಿ ಸತತ ಐದು ಗೆಲುವುಗಳನ್ನು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ನಲ್ಲಿ ನಾಲ್ಕನೇ ತಂಡವನ್ನು ನಿರ್ಧರಿಸಲು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ಅನ್ನು ಎದುರಿಸಲಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಮತ್ತು ಗುಜರಾತ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಂತರ ಸನ್‌ರೈಸರ್ಸ್ ಕೂಡ ಪ್ಲೇ ಆಫ್ ತಲುಪಿತು. ಈಗ ಕೇವಲ ಒಂದು ಸ್ಥಾನಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸಿಎಸ್​ಕೆ ಮತ್ತು ಆರ್​ಸಿಬಿ ಎರಡು ತಂಡಗಳು ರೇಸ್‌ನಲ್ಲಿವೆ. ಈ ಪಂದ್ಯ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​ಸಿಬಿ ಪರ ಆರೆಂಜ್ ಕ್ಯಾಪ್ ಹೊಂದಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಅರ್ಧಶತಕ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಉತ್ತಮವಾಗಿ ಆಡುತ್ತಿದ್ದಾರೆ. ಇಂದಿನ ಪ್ರಮುಖ ಪಂದ್ಯದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಬರಬೇಕಿದೆ. ಈ ಋತುವಿನಲ್ಲಿ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದವರು ನಾಯಕ ರುತುರಾಜ್ ಗಾಯಕ್ವಾಡ್. ಓಪನರ್ ರಚಿನ್ ರವೀಂದ್ರ ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ವಿಫಲವಾಗಿರುವ ಶಿವಂ ದುಬೆ ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಕೊನೆಯ ಪಂದ್ಯಕ್ಕೆ ಆರ್​ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್​ಕೆಗೆ ನಡುಕ ಶುರು

ಈ ಋತುವಿನಲ್ಲಿ ಆರ್​ಸಿಬಿ ಬೌಲರ್‌ಗಳ ಪೈಕಿ ಯಶ್ ದಯಾಲ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್ ಮತ್ತು ಸ್ವಪ್ನಿಲ್ ಸಿಂಗ್ ಅವರಿಗೆ ಕಠಿಣ ಸವಾಲು ಎದುರಾಗಿದೆ. ಸಿಎಸ್​ಕೆ ಬೌಲಿಂಗ್​ನಲ್ಲಿ ವೇಗಿಗಳಾದ ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಉತ್ತಮ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ಸ್ಪಿನ್ ಜಾದು ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ ಮೊದಲ 4 ಪಂದ್ಯಗಳಲ್ಲಿ ರನ್ ಮಳೆ ಸುರಿದಿವೆ. ಇಲ್ಲಿ ಹೈದರಾಬಾದ್ 287 ರನ್ ಗಳಿಸಿತ್ತು. ಆದರೆ ಕಳೆದ ಎರಡು ಪಂದ್ಯಗಳಿಂದ ಬೌಲರ್‌ಗಳಿಗೆ ಪಿಚ್ ಸಹಾಯಕವಾಗಿದೆ. ಇದರಿಂದ ಆರ್‌ಸಿಬಿಗೂ ಲಾಭವಾಗಿದೆ. ಈಗ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಬೌಲರ್‌ಗಳಿಗೆ ಪಿಚ್ ಸಹಕಾರಿಯಾಗಲಿದೆ. ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದು, ವಿಕೆಟ್ ಪಡೆದರೆ ಬೆಂಗಳೂರು ತಂಡಕ್ಕೆ ಲಾಭವಾಗಬಹುದು.

ಆದರೆ, ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ನಗರದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. IMD ಹೊರತುಪಡಿಸಿ, Accuweather.com ಪಂದ್ಯದ ಸಮಯದಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗುವ ವೇಳೆ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಆಕಾಶದಲ್ಲಿ ಶೇ. 100ರಷ್ಟು ಮೋಡ ಕವಿದ ವಾತಾವರಣವಿರುತ್ತದೆ.

ಎಷ್ಟೇ ಮಳೆ ಬರಲಿ, 15 ನಿಮಿಷದಲ್ಲಿ ಪಂದ್ಯ ಆರಂಭ; ಚಿನ್ನಸ್ವಾಮಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಡಿಯೋ ನೋಡಿ

ಆದರೆ, ಚಿನ್ನಸ್ವಾಮಿಯ ಒಳಚರಂಡಿ ವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು, ಇದರಿಂದಾಗಿ ಮಳೆ ನಿಂತ 30 ನಿಮಿಷಗಳಲ್ಲಿ ಆಟ ಪ್ರಾರಂಭವಾಗಬಹುದು. ಒಂದು ವೇಳೆ ಪಂದ್ಯ ವಾಶ್‌ಔಟ್‌ ಆದಲ್ಲಿ ಬೆಂಗಳೂರು ತಂಡದ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸುವ ಅವಕಾಶವೂ ಕಳೆದುಕೊಳ್ಳಲಿದೆ. ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು, ಆದರೆ ಗುರಿಯನ್ನು ಬೆನ್ನಟ್ಟುವಾಗ, ಅವರು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಈ ವಾರ ಎರಡು ಪಂದ್ಯಗಳು ಈಗಾಗಲೇ ಮಳೆಯಿಂದಾಗಿ ರದ್ದಾಗಿವೆ.

ಉಭಯ ತಂಡಗಳ ಸಂಭಾವ್ಯ 11

ಆರ್​ಸಿಬಿ- ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಯಶ್ ದಯಾಲ್, ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್ .

ಸಿಎಸ್​ಕೆ- ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಶಿವಂ ದುಬೆ, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ