ಎಲ್ಲರಿಗೂ ಟೈಮ್ ಬರುತ್ತೆ… ಡ್ರೆಸ್ಸಿಂಗ್ ರೂಮ್ನಲ್ಲಿ ಅಶ್ವಿನ್ ಭಾವುಕ ಮಾತು
R Ashwin Retirement: ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 200 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 27246 ಎಸೆತಗಳನ್ನು ಎಸೆದಿರುವ ಅವರು 537 ವಿಕೆಟ್ ಕಬಳಿಸಿದ್ದಾರೆ. ಇದೀಗ 38ನೇ ವಯಸ್ಸಿಗೆ ನಿವೃತ್ತಿ ಘೋಷಿಸುವ ಮೂಲಕ ಅಶ್ವಿನ್ ಟೀಮ್ ಇಂಡಿಯಾಗೆ ಗುಡ್ ಬೈ ಹೇಳಿದ್ದಾರೆ.
ಟೀಮ್ ಇಂಡಿಯಾದ ಲೆಜೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಬ್ರಿಸ್ಬೇನ್ನಲ್ಲಿ ನಡೆದ ಗಾಬಾ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಅಶ್ವಿನ್ ಅವರ ಯುಗಾಂತ್ಯವಾಯಿತು.
ಈ ನಿವೃತ್ತಿ ಘೋಷಣೆ ಬಳಿಕ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡ ಅಶ್ವಿನ್, ವಿದಾಯ ಭಾಷಣ ಮಾಡಿದರು. ಡ್ರೆಸ್ಸಿಂಗ್ ರೂಮ್ ಸ್ಪೀಚ್ ವೇಳೆ ಭಾವುಕರಾಗಿ ಕಾಣಿಸಿಕೊಂಡ ಅಶ್ವಿನ್, ಇದೀಗ ನಾನು ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಂತೆ ಭಾಸವಾಗುತ್ತಿದೆ. ನಾನು ಎಲ್ಲರ ಪರಿವರ್ತನೆಯನ್ನು ನೋಡಿದ್ದೇನೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಎಲ್ಲಾ ವಿದಾಯವನ್ನು ನೋಡಿರುವೆ.
ಎಲ್ಲರಿಗೂ ಸಮಯ ಬರುತ್ತದೆ. ಇದು ನಿಜವಾಗಿಯೂ ನನ್ನ ಸಮಯ. ನಾನು ಅದನ್ನು ಸಂಪೂರ್ಣವಾಗಿ ಆನಂದಿಸಿದೆ. ನಾನು ಕೆಲವು ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ. ವಿಶೇಷವಾಗಿ ಕಳೆದ 4-5 ವರ್ಷಗಳಿಂದ ಸಹ ಆಟಗಾರರೊಂದಿಗೆ ಉತ್ತಮ ಫ್ರೆಂಡ್ಶಿಪ್ನಲ್ಲಿದ್ದೆ. ಇದೀಗ ಅವರೆಲ್ಲನ್ನೂ ಆಟಗಾರರನ್ನು ಬಿಟ್ಟು ಹೋಗುತ್ತಿದ್ದೇನೆ.
ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯವಾಗುತ್ತಿದೆ ಹೊರತು, ನನ್ನಲ್ಲಿನ ಕ್ರಿಕೆಟ್ ಕೊನೆಗೊಳ್ಳುವುದಿಲ್ಲ. ಯಾವುದೇ ಸಂದರ್ಭದಲ್ಲೂ ಕರೆ ಮಾಡಿ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತಾ ರವಿಚಂದ್ರನ್ ಅಶ್ವಿನ್ ತಮ್ಮ ವಿದಾಯ ಭಾಷಣ ಕೊನೆಗೊಳಿಸಿದರು.